Home ಜಿಲ್ಲೆ ಕಡಿಮೆ ಗುಣಮಟ್ಟದ ಹಾಲು ಶೇಖರಣೆ ಮಾಡುವ ಡೇರಿಗಳ ವಿರುದ್ಧ ಕ್ರಮಕ್ಕೆ ಮನವಿ

ಕಡಿಮೆ ಗುಣಮಟ್ಟದ ಹಾಲು ಶೇಖರಣೆ ಮಾಡುವ ಡೇರಿಗಳ ವಿರುದ್ಧ ಕ್ರಮಕ್ಕೆ ಮನವಿ

ಬೀದರ್: ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೆ ಕಡಿಮೆ ಗುಣಮಟ್ಟದ ಹಾಲು ಶೇಖರಣೆ, ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ಹಾಲಿನ ಡೇರಿಗಳ ವಿರುದ್ಧ ತಪಾಸಣೆ ನಡೆಸಿ, ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುವಂತೆ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ಬೀದರ್ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಅವರು, ಜಿಲ್ಲೆಯಲ್ಲಿ ಹಾಲಿನ ಗುಣಮಟ್ಟದ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಗಮನ ಸೆಳೆದರು. ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪಾಲಿಸದೆ ಹಾಲು ಶೇಖರಣೆ ಮತ್ತು ಸಂಸ್ಕರಣೆ ಮಾಡುವ ಡೇರಿಗಳನ್ನು ಗುರುತಿಸಿ, ಅವುಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಂತಹ ಹಾಲು ಮಾರುಕಟ್ಟೆಗೆ ಬಿಡುಗಡೆಯಾಗುವುದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ನಿಯಮಿತ ತಪಾಸಣೆ ನಡೆಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ಭೀಮರಾವ ಬಳತೆ, ಬಂಡುರಾವ್ ಕುಲಕರ್ಣಿ, ರೇವಣಸಿದ್ದಪ್ಪ ಪಾಟೀಲ್, ಸಂತೋಷ ಪಾಟೀಲ್, ನಾಗರಾಜ ಪಾಟೀಲ್, ಮಾರುತಿ ಕಾಶಂಪುರೆ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿ. ರವಿಕಿರಣ ಉಪಸ್ಥಿತರಿದ್ದರು.