Home ಮುಖಪುಟ ಸುದ್ದಿ ಸಂಪುಟ ಸರ್ಜರಿ:ದೆಹಲಿಗೆ ಸಿಎಂ

ಸಂಪುಟ ಸರ್ಜರಿ:ದೆಹಲಿಗೆ ಸಿಎಂ

ಬೆಂಗಳೂರು, ಆ. ೨೭- ಮೂರನೇ ಸುತ್ತಿನ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು, ಇನ್ನೆರಡು ಮೂರು ದಿನಗಳಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸಣ್ಣ ಪ್ರಮಾಣದ ಸರ್ಜರಿ ಆಗಲಿದೆ.


೨ನೇ ಹಂತದ ಸಚಿವ ಸಂಪುಟ ವಿಸ್ತರಣೆ ನಂತರ ಸಚಿವ ಸ್ಥಾನ ಸಿಗದ ಹಿರಿಯ ಶಾಸಕರುಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ, ಅತೃಪ್ತಿ ಹೊರ ಹಾಕಿದ್ದರು. ಆ ಸಂದರ್ಭದಲ್ಲಿ ಕೆಲ ಹಿರಿಯ ಶಾಸಕರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಿರಿಯ ಶಾಸಕರಿಗೆ ಸಚಿವ ಸ್ಥಾನದ ಭರವಸೆ ನೀಡಿ ಅವರ ಮನವೊಲಿಸಿದ್ದರು.


ಹಿರಿಯ ಶಾಸಕರ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೆ ಹೈಕಮಾಂಡ್ ಜತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ಮಾಡಿ ಸಚಿವ ಸಂಪುಟಕ್ಕೆ ಸಣ್ಣ ಪ್ರಮಾಣದ ಸರ್ಜರಿ ಅಗತ್ಯ ಇರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.


ಕಾಂಗ್ರೆಸ್ ಹೈಕಮಾಂಡ್ ಸಹ ಸಣ್ಣ ಪ್ರಮಾಣದ ಸರ್ಜರಿಗೆ ಒಪ್ಪಿಗೆ ನೀಡಿತ್ತು.
ವಿಧಾನ ಮಂಡಲದ ಅಧಿವೇಶನ ಇದ್ದ ಕಾರಣ ಸಂಪುಟ ಸರ್ಜರಿ ವಿಳಂಬವಾಗಿತ್ತು.
ಈಗ ಅಧಿವೇಶನ ಮುಗಿದ ಬೆನ್ನಲ್ಲೆ ಸಂಪುಟ ಸರ್ಜರಿಗೆ ವರಿಷ್ಠರ ಜತೆ ಚರ್ಚಿಸಿ ಮುಹೂರ್ತ ನಿಗದಿ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಿಗ್ಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದರು.


ಇಂದು ಸಂಜೆ ಇಲ್ಲವೇ ರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಂಪುಟ ಸರ್ಜರಿಯ ಬಗ್ಗೆ ಚರ್ಚೆ ನಡೆಸುವರು.
ಬರುವ ಸೋಮವಾರದೊಳಗೆ ಸಂಪುಟ ಸರ್ಜರಿಯಾಗುವುದು ಪಕ್ಕಾ ಆಗಿದೆ.
ಸಚಿವ ಸಂಪುಟದಲ್ಲಿ ಅಲ್ಪ ಪ್ರಮಾಣದ ಬದಲಾವಣೆಗೆ ಮುಂದಾಗಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ಒಬ್ಬ ಸಚಿವರಿಂದ ರಾಜೀನಾಮೆ ಪಡೆದು ಆ ಸ್ಥಾನಕ್ಕೆ ವಿಜಯನಗರದ ಶಾಸಕ ಎಂ. ಕೃಷ್ಣಪ್ಪರವರನ್ನು ತರಲು ನಿರ್ಧರಿಸಿದ್ದಾರೆ.
ಹಾಗೆಯೇ ಸಂಪುಟದಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಕುರುಬ ಸಮುದಾಯದ ಬಸವಣ್ಣ ನೀಲಣ್ಣ ಶಿವಣ್ಣನವರ್ ರವರನ್ನು ನೇಮಕ ಮಾಡುವ ಬಗ್ಗೆಯೂ ವರಿಷ್ಠರೊಡನೆ ಚರ್ಚೆ ನಡೆಸುವರು.


ಸಂಪುಟದಲ್ಲಿ ಮಹಿಳಾ ಸಚಿವರು ಇರದ ಕಾರಣ ಮಹಿಳಾ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್ ಜತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.


ಇಂದು ಬೆಳಿಗ್ಗೆಯೇ ದೆಹಲಿಗೆ ತೆರಳಿದ ಡಿ.ಕೆ. ಶಿವಕುಮಾರ್ ರವರು ವರಿಷ್ಠರಿಂದ ೩ನೇ ಹಂತದ ಸಂಪುಟ ವಿಸ್ತರಣೆಗೆ ಅನುಮತಿ ಪಡೆದು ಮುಹೂರ್ತ ನಿಗದಿ ಮಾಡಲಿದ್ದು, ಬಹುತೇಕ ಇನ್ನು ೩-೪ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದೆ.


ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಒಬ್ಬ ಸಚಿವರ ಪದತ್ಯಾಗದ ಅಗತ್ಯವಿದ್ದು, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಬಿ. ನಾಗೇಂದ್ರರವರಿಂದ ರಾಜೀನಾಮೆ ಪಡೆದು ಆ ಸ್ಥಾನಕ್ಕೆ ಮಹಿಳಾ ಶಾಸಕಿಯೊಬ್ಬರನ್ನು ಸಚಿವರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಹೈಕಮಾಂಡ್ ಸಮ್ಮುಖದಲ್ಲೇ ಎಲ್ಲವೂ ಇತ್ಯರ್ಥವಾಗಲಿದೆ.


ಹಿರಿಯ ಶಾಸಕರಾಗಿರುವ ಎಂ. ಕೃಷ್ಣಪ್ಪ ರವರಿಗೆ ಸಚಿವ ಸ್ಥಾನ ನೀಡಲು ಒಕ್ಕಲಿಗ ಸಮುದಾಯದ ಸಚಿವರೊಬ್ಬರ ರಾಜೀನಾಮೆ ಕೊಡಿಸುವ ಅಗತ್ಯವಿದ್ದು, ಯಾರನ್ನು ರಾಜೀನಾಮೆ ಕೊಡಿಸಬೇಕು ಎಂಬ ಬಗ್ಗೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರೊಡನೆ ಚರ್ಚೆ ನಡೆಸುವರು.
೩ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ವಿಜಯನಗರ ಶಾಸಕರಾದ ಎಂ. ಕೃಷ್ಣಪ್ಪರವರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಪಕ್ಕಾ ಎಂದು ಹೇಳಲಾಗಿದೆ.


ನಿಗಮ ಮಂಡಳಿ ಬಗ್ಗೆಯೂ ಚರ್ಚೆ


ಸಚಿವ ಸ್ಥಾನ ಸಿಗದ ಹಿರಿಯ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದು, ೧೮ ತಿಂಗಳು ಅವಧಿ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರುಗಳಿಂದ ರಾಜೀನಾಮೆ ಪಡೆದು ಆ ಸ್ಥಾನಕ್ಕೆ ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು ಹಾಗೂ ಹೊಸ ಶಾಸಕರುಗಳನ್ನು ನೇಮಕ ಮಾಡುವ ಬಗ್ಗೆಯೂ ವರಿಷ್ಠರೊಡನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ.
೩ನೇ ಹಂತದ ಸಂಪುಟ ವಿಸ್ತರಣೆಯ ಬಳಿಕ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆಗಳನ್ನು ನಡೆಸಲು ವರಿಷ್ಠರಿಂದ ಡಿ.ಕೆ. ಶಿವಕುಮಾರ್ ಹಸಿರು ನಿಶಾನೆ ಪಡೆಯುವರು ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ನಾಗೇಂದ್ರ ರಾಜೀನಾಮೆ ಇಂದು ತೀರ್ಮಾನ


ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರರವರ ರಾಜೀನಾಮೆ ಪಡೆಯುವ ಸಂಬಂಧ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರ ಜತೆ ಚರ್ಚೆ ನಡೆಸುವರು.


ಸಚಿವ ನಾಗೇಂದ್ರ ರವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ಸದನದಲ್ಲಿ ಹೋರಾಟ ನಡೆಸಿದ ನಂತರ ಪಾದಯಾತ್ರೆಗೆ ಮುಂದಾಗಿವೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಚಿವ ಬಿ. ನಾಗೇಂದ್ರ ಸಹ ಪಕ್ಷಕ್ಕೆ ತೊಂದರೆಯಾಗುವುದಾದರೆ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.


ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ.


ನಾಗೇಂದ್ರ ರಾಜೀನಾಮೆಗೆ ಸಂಬಂಧಿಸಿದಂತೆ ಹೈಕಮಾಂಡ್ ನೀಡುವ ನಿರ್ದೇಶನದಂತೆ ಅವರು ನಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹಾಗಾಗಿ ಸಚಿವ ನಾಗೇಂದ್ರ ಅವರಿಗೆ ಇಂದು ನಿರ್ಣಾಯಕ ದಿನವಾಗಿದೆ.


ದೆಹಲಿಗೆ ನಾಗೇಂದ್ರ


ಸಚಿವ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿರುವ ಬೆನ್ನಲ್ಲೆ ಸಚಿವ ನಾಗೇಂದ್ರ ರವರು ದೆಹಲಿಗೆ ತೆರಳಿದ್ದು, ವರಿಷ್ಠರೊಡನೆ ಚರ್ಚಿಸಿ ಒಂದು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಲಾಗಿದೆ.