Home ಜಿಲ್ಲೆ ಬೆಂಗಳೂರು ಪ್ರಿಯಾಂಕ್ ವಿರುದ್ಧ ಬಿವೈವಿ ಕಿಡಿ

ಪ್ರಿಯಾಂಕ್ ವಿರುದ್ಧ ಬಿವೈವಿ ಕಿಡಿ

ಬೆಂಗಳೂರು, ಫೆ. ೧೬- ಆರ್‌ಎಸ್‌ಎಸ್ ನೋಂದಣಿ ಆಗುವಂತೆ ಮಾಡುತ್ತೇನೆ ಎಂದಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವ ಪ್ರಿಯಾಂಕ ಖರ್ಗೆಯವರೇ ನಿಮ್ಮ ತಂದೆ ಅಧ್ಯಕ್ಷರಾಗಿರುವ ರಾಜಕೀಯ ಭೂಪಟದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಅಂಚಿನಲ್ಲಿರುವ ಕಾಂಗ್ರೆಸ್ ಪಕ್ಷದ ನೋಂದಣಿ ರದ್ಧತಿಯಾಗದಂತೆ ಮೊದಲು ಎಚ್ಚರ ವಹಿಸಿ. ನಂತರ ಇತರ ನೋಂದಣಿಗಳ ಬಗ್ಗೆ ತಲೆಕೆಡಿಸಿಕೊಳ್ಳುವಿರಂತೆ ಎಂದು ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಅಮೃತ ಹೊರ ಬರಲು ನಂಜು ನುಂಗಿದ ವಿಷಕಂಠನಂತೆ ಹಿಂದೂ ವಿರೋಧಿ ಕಾರ್ಕೋಟಕ ವಿಷ ಜಂತುಗಳ ಮೆಟ್ಟಿ ನಿಂತಿರುವ ಆರ್‌ಎಸ್‌ಎಸ್ ಸಂಸ್ಥೆಯನ್ನು ಕುಟುಕುವುದೇ ಮರಿಚೇಳೊಂದರ ಚೇಷ್ಠೆಯಾಗಿದೆ. ದೆವ್ವದ ಮನಸ್ಥಿತಿಯವರಿಂದ ದೈವೈದ ಮಾತು ಹೊರ ಬರಲು ಸಾಧ್ಯವೇ ಎಂದು ಪ್ರಿಯಾಂಕ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಜಕಾರಣದಲ್ಲಿ ನಿರಂತರ ರಾಜಕೀಯ ಅಧಿಕಾರ ಅನುಭವಿಸುತ್ತಾ ಬಂದಿರುವ ಖರ್ಗೆ ಕುಟುಂಬದ ಕೊಡುಗೆ ಏನೆಂದರೆ, ಭಾರತದ ಭೂಪಟದಲ್ಲಿ ಕಲ್ಯಾಣ ಕರ್ನಾಟಕವನ್ನು ಅತ್ಯಂತ ಹಿಂದುಳಿಯುವಂತೆ ಮಾಡಿದ್ದು ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ ಖರ್ಗೆಯವರು ಸಚಿವರಾದ ಮೇಲೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಾಗೂ ಕೀಳು ಪ್ರಚಾರದ ತೆವಲಿನಿಂದ ಆರ್‌ಎಸ್‌ಎಸ್‌ನ್ನು ಗುರಿಯಾಗಿಸಿಕೊಂಡು ಸಜ್ಜನಿಕೆ ಇಲ್ಲದೆ ಕೀಳು ಅಭಿರುಚಿಯ ಟೀಕೆ ಮಾಡುವ ತೆವಲು ಹಚ್ಚಿಕೊಂಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

ಪ್ರಿಯಾಂಕ ಖರ್ಗೆಯವರ ಆರ್‌ಎಸ್‌ಎಸ್ ವಿರೋಧಿ ಮಾತುಗಳಲ್ಲಿ ರಾಷ್ಟ್ರದ್ರೋಹಿ ಶಕ್ತಿಗಳನ್ನು ಮೆಚ್ಚಿಸುವ ಹಾಗೂ ಹಿಂದೂ ಧರ್ಮವನ್ನು ಅಪಮಾನಿಸುವ ಹಿನ್ನೆಲೆಯ ಮನಸ್ಥಿತಿ ಅಡಗಿದೆ. ಕಾಂಗ್ರೆಸ್ ಪಕ್ಷ ಹಿಂದೂ ಪರಂಪರೆ ಮತ್ತು ಹಿಂದೂಪರ ಸಂಘಟನೆಗಳನ್ನು ತೇಜೋವಧೆ ಮಾಡುವುದಕ್ಕಾಗಿಯೇ ಪ್ರಿಯಾಂಕ ಖರ್ಗೆಯವರಂತಹ ವಕ್ತಾರರುಗಳನ್ನು ನೇಮಿಸಿರುವಂತಿದೆ ಎಂದು ಅವರು ದೂರಿದ್ದಾರೆ.

ರಾಷ್ಟ್ರಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಂದಿಸುವುದು, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಹಿಂದೂಪರ ಕಾರ್ಯಕರ್ತರು ಹಾಗೂ ದಾರ್ಶನಿಕರನ್ನು ಗುರಿಯಾಗಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷದ ಕಾರ್ಯಸೂಚಿಯಾಗಿದೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ಗಿಡ ಎಂದೇ ಹೆಸರಾಗಿರುವ ಪಾರ್ಥೇನಿಯಂನಂಥ ಕಾಂಗ್ರೆಸ್ ಪಕ್ಷವನ್ನು ಕಳೆಯನ್ನು ಜನತೆ ಈಗಾಗಲೇ ದೇಶದಲ್ಲಿ ಬಹುತೇಕ ಕಿತ್ತೆಸೆದಿದ್ದಾರೆ. ರಾಜ್ಯದಲ್ಲೂ ಜನರು ಕಳೆ ಕೀಳಲು ಆರಂಭಿಸಿದ್ದಾರೆ. ೨೦೨೮ ರಲ್ಲಿ ಅದು ಪರಿಪೂರ್ಣಗೊಳ್ಳಲಿದೆ. ಆಗ ಪ್ರಿಯಾಂಕ ಖರ್ಗೆ ಯಾವ ನೋಂದಣಿ ಕಚೇರಿ ಮುಂದೆ ನಿಂತಿರುತ್ತಾರೋ ಕಾದು ನೋಡೋಣ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.