ಸಿಎಂ ರಾಜೀನಾಮೆಗೆ ಬಿವೈವಿ ಆಗ್ರಹ

ಬೆಂಗಳೂರು, ಜೂ. ೨೪- ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಇರಲು ಅನ್‌ಫಿಟ್ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.


ಬಿಜೆಪಿ ಕಚೇರಿಯಲ್ಲಿಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸರ್ಕಾರ ಶಾಪಗ್ರಸ್ಥ ಸರ್ಕಾರ.

ಕಾಂಗ್ರೆಸ್‌ನ ಶಾಸಕರೇ ಹತಾಶರಾಗಿದ್ದಾರೆ. ಈ ಸರ್ಕಾರ ಇದೆಯೋ, ಸತ್ತು ಹೋಗಿದೆಯೋ ಗೊತ್ತಿಲ್ಲ. ಲಂಚ ಇಲ್ಲದೆ ಸರ್ಕಾರದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ ಎಂದರು.


ಕಮಿಷನ್ ಮಾಫಿಯಾ ಮೂಲಕ ಆಡಳಿತ ನಡೆದಿದೆ. ಎಲ್ಲ ನೋಡಿಕೊಂಡು ಸಿದ್ಧರಾಮಯ್ಯ ಕಣ್ಮುಚ್ಚಿ ಕುಳಿತಿದ್ದಾರೆ. ದೇವರಾಜ ಅರಸು ದಾಖಲೆ ಮುಗಿಯಬೇಕು ಎಂದು ಸಿಎಂ ಕುರ್ಚಿಗೆ ಅಂಟಿ ಕುಳಿತಿದ್ದಾರೆ ಸರ್ಕಾರದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಕಮಿಷನ್ ಏಜೆಂಟರು ಸರ್ಕಾರ ನಡೆಸುತ್ತಿದ್ದಾರೆ. ಸ್ವತಃ ಈ ಕಮಿಷನ್ ಏಜೆಂಟರ್‌ನ್ನು ಸಿದ್ಧರಾಮಯ್ಯ ಅವರೇ ನೇಮಿಸಿದ್ದಾರೆ ಎಂದು ವಿಜಯೇಂದ್ರ ದೂರಿದರು.


ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಎಂ ವಸೂಲಿಗೆ ಟಾಸ್ಕ್ ಕೊಟ್ಟಿದ್ದಾರೆ. ಸಿದ್ಧರಾಮಯ್ಯ ಅವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ದೂರಿದ ಅವರು, ರಾಜ್ಯ ಸರ್ಕಾರದ ಪರಿಸ್ಥಿತಿ ನೋಡಿ ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರೆ ಹತಾಶಲಾಗಿದ್ದಾರೆ ಭ್ರಷ್ಟಾಚಾರಕ್ಕಾಗಿ ಸಚಿವರು ಕೌಂಟರ್‌ಗಳನ್ನು ತೆರೆದು ಕುಳಿತಿದ್ದಾರೆ. ಮುಖ್ಯಮಂತ್ರಿಗಳಿಗೆ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರದ ವಿರುದ್ಧ ನಾವು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಹೇಳಿದರು.


ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಗೋಪಾಲಕೃಷ್ಣ ಅವರು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳೇನು ಉತ್ತರ ಕೊಡುತ್ತಾರೆ ಎಂದು ವಿಜಯೇಂದ್ರ ಪ್ರಶ್ನಿಸಿದರು.


ಈ ಸರ್ಕಾರ ಬಂಡ ಸರ್ಕಾರ. ಮೊದಲು ಭ್ರಷ್ಟಾಚಾರಿಗಳನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ ಸಿ.ಟಿ. ರವಿ ಅವರು, ಭ್ರಷ್ಟಾಚಾರ ಮುಖ್ಯಮಂತ್ರಿಗಳ ಅರಿವಿಲ್ಲದೆ ನಡೆಯುತ್ತಿದೆ ಎಂದರೆ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಿದ್ಧರಾಮಯ್ಯ ಅನ್‌ಫಿಟ್ ಎಂದು ಹರಿಹಾಯ್ದರು.


ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಶಾಸಕರನ್ನು ಕರೆದು ಮಾತನಾಡುವುದಲ್ಲ ಭ್ರಷ್ಟಚಾಚಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಸಿಟಿ ರವಿ ಒತ್ತಾಯಿಸಿದರು.


ನಾವು ಈ ಸರ್ಕಾರದ ವಿರುದ್ಧ ಶಕ್ತಿ ಮೀರಿ ಹೋರಾಟ ನಡೆಸುತ್ತಿದ್ದೇವೆ. ಈ ಸರ್ಕಾರದಲ್ಲಿ ಎಲ್ಲರಿಗೂ ಬಂಡತನ, ಎಷ್ಟು ಹೇಳಿದರೂ ಕೇಳುತ್ತಿಲ್ಲ. ನಾವು ಮಾತಿನಲ್ಲೇ ಕಾಂಗ್ರೆಸ್‌ಗೆ ಹೊಡೆಯುತ್ತಿದ್ದೇವೆ. ಆದರೆ ಜನರು ಕಾಲಲ್ಲಿರುವುದನ್ನು ಬಿಚ್ಚಿ ಹೊಡೆಯುವ ಕಾಲ ಬರುತ್ತದೆ. ಆ ಕಾಲ ಬಂದಾಗಲೇ ಬುದ್ದಿ ಬರುವುದು ಎಂದು ಹರಿಹಾಯ್ದರು.


ಸಾರ್ವಜನಿಕವಾಗಿ ಬೆತ್ತಲಾದ ಮೇಲೂ ಮರ್ಯಾದೆ ಇಲ್ಲದವರ ತರ ಓಡಾಡುತ್ತಿರುವವರಿಗೆ ಏನು ಹೇಳುವುದು. ಸರ್ಕಾರದ ವಿರುದ್ಧ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.