Home ಜಿಲ್ಲೆ ತುಮಕೂರು ವರ್ಷಾಂತ್ಯಕ್ಕೆ ತಾಲ್ಲೂಕಿನ ೧೦೫ ಕೆರೆಗಳಿಗೆ ಎತ್ತಿನಹೊಳೆ ನೀರು: ಶಾಸಕ ಷಡಕ್ಷರಿ

ವರ್ಷಾಂತ್ಯಕ್ಕೆ ತಾಲ್ಲೂಕಿನ ೧೦೫ ಕೆರೆಗಳಿಗೆ ಎತ್ತಿನಹೊಳೆ ನೀರು: ಶಾಸಕ ಷಡಕ್ಷರಿ

ತಿಪಟೂರು, ಜೂ. ೧- ವರ್ಷಾಂತ್ಯದ ವೇಳೆಗೆ ತಾಲ್ಲೂಕಿನ ೧೦೫ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಲಾಗುವುದು. ಅರಸೀಕೆರೆ ಹಾಗೂ ತಿಪಟೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆ ಶೀಘ್ರದಲ್ಲೇ ಸಾಕಾರಗೊಳ್ಳಲಿದ್ದು, ಇದರಿಂದ ಮೀನುಗಾರಿಕೆಗೆ ವಿಪುಲ ಅವಕಾಶಗಳು ದೊರೆಯಲಿವೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.


ನಗರದ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಮೀನುಗಾರಿಕೆ ಇಲಾಖೆ ರಾಜ್ಯ ವಲಯ ಹಾಗೂ ಜಿಲ್ಲಾ ವಲಯ ಯೋಜನೆಯಡಿ ವಿವಿಧ ಸವಲತ್ತುಗಳು ಮತ್ತು ಮತ್ಸ್ಯವಾಹಿನಿ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೀನುಗಾರಿಕೆಯನ್ನು ರೈತರು ಉಪಕಸುಬಾಗಿ ಅಳವಡಿಸಿಕೊಳ್ಳಬಹುದು. ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಿದೆ ಎಂದರು.


ಸಿಲ್ಕ್, ಮಿಲ್ಕ್ ಹಾಗೂ ಫಿಶ್ ರೈತರ ಆದಾಯವನ್ನು ಹೆಚ್ಚಿಸುವ ಪ್ರಮುಖ ಉಪಕಸುಬುಗಳಾಗಿವೆ. ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶಗಳಿದ್ದು, ವರ್ಷಾಂತ್ಯಕ್ಕೆ ೧೦೫ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಅವರು ಹೇಳಿದರು.


ಮೀನುಗಾರಿಕೆ ಕೇವಲ ಆದಾಯ ತರುವ ಉದ್ಯಮವಲ್ಲ, ಮನುಷ್ಯನ ಆರೋಗ್ಯಕ್ಕೂ ಉತ್ತಮ ಆಹಾರ ಒದಗಿಸುವ ಕ್ಷೇತ್ರವಾಗಿದೆ. ತಾಲ್ಲೂಕಿನ ಮೀನುಗಾರರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದ್ದು, ಮತ್ಸ್ಯಾಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಜಮೀನುಗಳಲ್ಲಿ ಮೀನುಗಾರಿಕೆ ನಡೆಸುವ ರೈತರಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.


ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ನಂಜುಂಡಪ್ಪ, ತಾಲ್ಲೂಕಿನ ನೊಣವಿನಕೆರೆ, ಈಚನೂರು ಕೆರೆ, ಕರಡಿಕೆರೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ದೊಡ್ಡ ಕೆರೆಗಳಿದ್ದು, ಮೀನುಗಾರಿಕೆಗೆ ಉತ್ತಮ ಅವಕಾಶಗಳಿವೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಹೊಂಡಗಳ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಜಿಲ್ಲೆಯಲ್ಲಿ ೧.೨೦ ಕೋಟಿ ಮೀನು ಮರಿಗಳಿಗೆ ಬೇಡಿಕೆ ಇದ್ದು, ಮೀನುಮರಿ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಮುಖಂಡರಾದ ಹೊಸಳ್ಳಿ ಬಸವರಾಜು, ಶಿವಪುರ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.