Home ಜಿಲ್ಲೆ ಅಧಿಕೃತ ಮಾರಾಟಗಾರರಿಂದಲೇ ಬೀಜ, ಗೊಬ್ಬರ ಖರೀದಿಸಿ: ರಾಮನಗೌಡ ಪಾಟೀಲ್

ಅಧಿಕೃತ ಮಾರಾಟಗಾರರಿಂದಲೇ ಬೀಜ, ಗೊಬ್ಬರ ಖರೀದಿಸಿ: ರಾಮನಗೌಡ ಪಾಟೀಲ್

ಸುರಪುರ:ಮೇ.೩೦: ರೈತರು ಕಳಪೆ ಬೀಜ ಹಾಗೂ ನಕಲಿ ಗೊಬ್ಬರಗಳಿಂದ ಮೋಸ ಹೋಗದಂತೆ ಪರವಾನಗಿ ಹೊಂದಿರುವ ಅಧಿಕೃತ ಮಾರಾಟಗಾರರಿಂದಲೇ ಬೀಜ ಮತ್ತು ಗೊಬ್ಬರ ಖರೀದಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ್ ಸಲಹೆ ನೀಡಿದರು.ನಗರದ ವಿವಿಧ ಬೀಜ ಮತ್ತು ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಂಗಡಿಗಳಲ್ಲಿ ಲಭ್ಯವಿರುವ ಬೀಜ, ಗೊಬ್ಬರಗಳ ಗುಣಮಟ್ಟ, ಸಂಗ್ರಹಣೆ ವ್ಯವಸ್ಥೆ ಹಾಗೂ ಮಾರಾಟ ದಾಖಲೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಬೀಜ ಅಥವಾ ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಜೊತೆಗೆ ಉತ್ಪನ್ನದ ಅವಧಿ, ಕಂಪನಿ ಹೆಸರು, ಗುಣಮಟ್ಟದ ಪ್ರಮಾಣಪತ್ರ ಹಾಗೂ ಲೇಬಲ್ ವಿವರಗಳನ್ನು ಪರಿಶೀಲಿಸಿ ಖರೀದಿ ಮಾಡಬೇಕು ಎಂದು ತಿಳಿಸಿದರು.

ನಕಲಿ ಹಾಗೂ ಕಳಪೆ ಕೃಷಿ ಉತ್ಪನ್ನಗಳ ಬಗ್ಗೆ ರೈತರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಸುರಪುರ ತಾಲೂಕಿನಲ್ಲಿ ೮೨ ಮಿ.ಮೀ. ಹಾಗೂ ಹುಣಸಗಿ ತಾಲೂಕಿನಲ್ಲಿ ೭೨ ಮಿ.ಮೀ. ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಭೂಮಿಯನ್ನು ಹದಗೊಳಿಸಿ ಬಿತ್ತನೆಗೆ ಸಿದ್ಧರಾಗಿದ್ದಾರೆ. ಕೆಲವೆಡೆ ಹತ್ತಿ ಬಿತ್ತನೆ ಸಹ ಆರಂಭವಾಗಿದೆ ಎಂದು ಹೇಳಿದರು.

ಈ ವರ್ಷ ಸುರಪುರ ಭಾಗದಲ್ಲಿ ಭತ್ತ ೬೦,೨೧೬ ಹೆಕ್ಟೇರ್, ಸಜ್ಜೆ ೬೭,೨೩೦ ಹೆಕ್ಟೇರ್, ತೊಗರಿ ೨೩,೪೭೫ ಹೆಕ್ಟೇರ್, ಜೋಳ ೫೨೩ ಹೆಕ್ಟೇರ್, ಕಬ್ಬು ೨೨೮ ಹೆಕ್ಟೇರ್ ಹಾಗೂ ಸೂರ್ಯಕಾಂತಿ ೨೭೫ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಪರಿಶೀಲನೆ ವೇಳೆ ಕೃಷಿ ಇಲಾಖೆ ಅಧಿಕಾರಿ ವಿನಾಯಕ ಹಾಗೂ ಬೀಜ ಮತ್ತು ಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.