Home ಜಿಲ್ಲೆ ಕಲಬುರಗಿ ಬಸ್ ನಿಲ್ದಾಣ ಕಾಮಗಾರಿ ಆಮೆಗತಿ:ನೀರು-ನೆರಳು-ಆಸನ ಕೊರತೆಯಲ್ಲಿ ನರಳುತ್ತಿರುವ ಆಳಂದ ಪ್ರಯಾಣಿಕರು

ಬಸ್ ನಿಲ್ದಾಣ ಕಾಮಗಾರಿ ಆಮೆಗತಿ:ನೀರು-ನೆರಳು-ಆಸನ ಕೊರತೆಯಲ್ಲಿ ನರಳುತ್ತಿರುವ ಆಳಂದ ಪ್ರಯಾಣಿಕರು

ಆಳಂದ:ಮಾ.6: ಪಟ್ಟಣದ ಬಸ್ ನಿಲ್ದಾಣ ಪುನರ್ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಆರು ತಿಂಗಳಿಂದ ಕಾಮಗಾರಿ ತಳಹಂತದಲ್ಲೇ ಸಿಲುಕಿರುವುದರಿಂದ, ತಾತ್ಕಾಲಿಕ ವ್ಯವಸ್ಥೆಗಳ ಕೊರತೆಯ ನಡುವೆ ಸಾವಿರಾರು ಪ್ರಯಾಣಿಕರು ಪ್ರತಿದಿನ ಪರದಾಡುವಂತಾಗಿದೆ. ನೀರು, ನೆರಳು, ಆಸನಗಳು ಸೇರಿದಂತೆ ಮೂಲ ಸೌಕರ್ಯಗಳಿಲ್ಲದೆ, ಇಕ್ಕಟ್ಟಿನಲ್ಲೇ ಬಸ್ ನಿಲ್ಲುಗಡೆ ನಡೆಯುತ್ತಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ.
40 ವರ್ಷ ಹಳೆಯದಾದ ಬಸ್ ನಿಲ್ದಾಣ ತೆಗ್ಗು ಪ್ರದೇಶದಲ್ಲಿರುವುದರಿಂದ ಮಳೆ ನೀರು ನಿಂತು ಹಾಳಾಗುತ್ತಿದ್ದ ಹಿನ್ನೆಲೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣಕ್ಕೆ 2025ರ ಸೆಪ್ಟೆಂಬರ್ 6ರಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆ ವೇಳೆ ಶಾಸಕ ಬಿ.ಆರ್. ಪಾಟೀಲ ಅವರು 10 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಚಿವರ ಮೂಲಕವೇ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆರು ತಿಂಗಳು ಕಳೆದರೂ ಕಾಮಗಾರಿ ಇನ್ನೂ ತಳಪಾಯ ಹಂತದಲ್ಲೇ ಮುಂದುವರೆದಿರುವುದು ಜನರ ನಿರೀಕ್ಷೆಗಳಿಗೆ ತಣ್ಣೀರು ಸುರಿದಂತಾಗಿದೆ.
ಕಾಮಗಾರಿ ಸ್ಥಳದಲ್ಲೇ ತಾತ್ಕಾಲಿಕವಾಗಿ ಬಸ್ ನಿಲ್ಲುಗಡೆ ವ್ಯವಸ್ಥೆ ಮಾಡಿರುವುದರಿಂದ, ವಾಹನ ಸಂಚಾರ ಗೊಂದಲ, ಪ್ರಯಾಣಿಕರ ಜಂಗುಳಿ, ಅಪಾಯಕರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ಲುಗಡೆಗೆ ಸೂಕ್ತ ಸ್ಥಳದ ಕೊರತೆಯಿಂದ ಚಾಲಕರು ಮತ್ತು ನಿರ್ವಾಹಕರೂ ತೊಂದರೆ ಅನುಭವಿಸುತ್ತಿದ್ದಾರೆ. ಶೌಚಾಲಯ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಇಲ್ಲದೆ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಪರೀತ ಬೇಸಿಗೆ ಬಿಸಿಲಿನಲ್ಲಿ ಆಸನಗಳಿಲ್ಲದೆ ನಿಂತುಕೊಂಡೇ ಬಸ್ ಕಾಯುವ ಪರಿಸ್ಥಿತಿ ಪ್ರಯಾಣಿಕರ ಸಹನಶೀಲತೆಯನ್ನು ಪರೀಕ್ಷಿಸುತ್ತಿದೆ.
ಶಾಸಕ ಬಿ.ಆರ್. ಪಾಟೀಲ ಹಾಗೂ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ, ಇನ್ನೂ ತಳಮಟ್ಟದ ಕಾಮಗಾರಿ ಪೂರ್ಣಗೊಳ್ಳದೆ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಆರಂಭದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿತ್ತಾದರೂ, ಸಂಬಂಧಿತ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆಳಂದದಿಂದ ಜಿಲ್ಲಾ ಕೇಂದ್ರ ಕಲಬುರಗಿಗೆ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಬಸ್‍ಗಳ ಕೊರತೆ ತೀವ್ರವಾಗಿದೆ. ಸಮರ್ಪಕ ಸಂಖ್ಯೆಯ ಬಸ್‍ಗಳನ್ನು ನಿಯೋಜಿಸದೆ ಮೇಲಾಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಣಾಮ, ಜನರು ದೀರ್ಘ ಸಮಯ ಬಸ್‍ಗಾಗಿ ಕಾಯುವಂತಾಗಿದ್ದು, ಉದ್ಯೋಗ, ಶಿಕ್ಷಣ ಹಾಗೂ ಚಿಕಿತ್ಸಾ ಅಗತ್ಯಗಳಿಗೆ ತೆರಳುವವರಿಗೆ ತೀವ್ರ ತೊಂದರೆ ಉಂಟಾಗಿದೆ.
ಒಟ್ಟಾರೆ, ಬಸ್ ನಿಲ್ದಾಣ ಕಾಮಗಾರಿ ಆಮೆಗತಿ, ತಾತ್ಕಾಲಿಕ ವ್ಯವಸ್ಥೆಗಳ ಕೊರತೆ, ಮೂಲ ಸೌಕರ್ಯಗಳ ಅಭಾವ ಹಾಗೂ ಬಸ್ ಸೇವೆಗಳ ಅಸಮರ್ಪಕತೆ ದಟ್ಟಣೆ ಸೇರಿ ಆಳಂದ ತಾಲೂಕು ಪ್ರಯಾಣಿಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ. ತಕ್ಷಣವೇ ಕಾಮಗಾರಿಯನ್ನು ವೇಗಗೊಳಿಸಿ, ತಾತ್ಕಾಲಿಕವಾಗಿ ನೆರಳು, ನೀರು, ಆಸನ, ಶೌಚಾಲಯ ಮತ್ತು ಸಮರ್ಪಕ ಬಸ್ ನಿಲ್ಲುಗಡೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.