ವಿಜಯಪುರ, ನ.೩: ಸರ್ವ ಧರ್ಮೀಯರ ಪುಣ್ಯಸ್ಥಳಗಳು ಧಾರ್ಮಿಕ ತವರು ಮನೆಗಳಿದ್ದಂತೆ. ಶರಣರು ೧೨ ನೇ ಶತಮಾನದಲ್ಲಿ ಅಸೂಯೆ ರಹಿತವಾದ ಸಮಾನತೆಯ ಅನುಭಾವವುಳ್ಳ ಸಮಾಜವನ್ನು ನಿರ್ಮಿಸಿದ್ದರು ಎಂದು ಕೂಡಲಸಂಗಮದ ಬಸವ ಧರ್ಮಪೀಠದ ದ್ವಿತೀಯ ಶ್ರೀ ಗಂಗಾ ಮಾತಾಜಿ ಬಣ್ಣಿಸಿದರು.
ಅವರು ಪಟ್ಟಣದ ಮಹಂತಿನ ಮಠದ ಸಭಾಂಗಣದಲ್ಲಿ ೩೯ ನೇ ಶರಣ ಮೇಳದ ಪ್ರಚಾರ ಕಾರ್ಯಕ್ರಮ ಹಾಗೂ ನೂತನ ದಿನದರ್ಶಿಕೆ ಮತ್ತು ಪ್ರಚಾರ ಕಾರ್ಯಕ್ರಮದ ಬಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಬಸವ ಧರ್ಮದ ಬಸವಧ್ವಜವನ್ನು ಧ್ವಜಾರೋಹಣ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕದಳಿ ವೇದಿಕೆಯ ಅಧ್ಯಕ್ಷರಾದ ಶರಣೆ ಸ್ವರ್ಣ ಗೌರಿ ಮಹದೇವ್ ರವರು ಮಾತನಾಡುತ, ಬದಲಾಗುತ್ತಿರುವ ಕಾಲಮಾನದಲ್ಲಿ ಶರಣರ ವಚನಗಳು, ಚಿಂತನೆಗಳು, ಅನುಭವಗಳು ಎಲ್ಲವೂ ಎಲ್ಲರ ನಡುವೆ ವಿಚಾರಗಳಾಗಿ ಪ್ರಚಾರವಾಗುತ್ತಿದೆಯೇ ಹೊರತು, ಯಾವುದೊಂದು ಸಹ ಆಚಾರ ರೂಪದಲ್ಲಿ ಬರುತ್ತಿಲ್ಲವೆಂದು, ಬಹಳಷ್ಟು ಜನ ಲಿಂಗದಾರಣೆ ಮಾಡಿಸಿಕೊಂಡಿದ್ದರು ಕೂಡ ಶಿವಪೂಜಾ ವಿಧಿಯನ್ನು ನಿರ್ವಹಿಸುತ್ತಿಲ್ಲವೆಂದು, ಪ್ರತಿದಿನ ಶಿವಪೂಜೆಯಲ್ಲಿ ತೊಡಗಿದಾಗ ಸಿಗುವ ನೆಮ್ಮದಿ, ಆನಂದ ಉತ್ಕೃಷ್ಟವಾಗಿರುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವದಳದ ಬಸವಣ್ಣನವರ ಭಾವಚಿತ್ರದ ದಿನದರ್ಶಿಕೆಗಳನ್ನು ಬಿಡುಗಡೆಗೊಳಿಸಿದ ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಹಾಗೂ ಅಕ್ಕನ ಬಳಗದ ಅಧ್ಯಕ್ಷರಾದ ವಿ ಅನಿಲ್ ಕುಮಾರ್ ರವರು ಮಾತನಾಡುತ್ತಾ, ಪ್ರತಿದಿನ ನಮ್ಮಲ್ಲಿನ ಕೇವಲ ಒಂದೊಂದು ವಚನವನ್ನು ನಾವು ವಾಚನ ಮಾಡುವುದರೊಂದಿಗೆ ಅರ್ಥವನ್ನು ಗ್ರಹಿಸಿದರೆ ಜೀವನದ ಮೋಕ್ಷ ದಾರಿಗೆ ಮತ್ತೇನು ಬೇಕಾಗಿಲ್ಲವೆಂದು ತಿಳಿಸಿದರು.
ಶರಣರಾದ ಬಾಬು ರಾಜೇಂದ್ರ ಪ್ರಸಾದ್ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶರಣರು ವೈಭವ, ಆಡಂಬರವಿಲ್ಲದ ಜೀವನ ನಡೆಸಲು ಮಾರ್ಗವನ್ನು ಹಾಕಿಕೊಟ್ಟರು. ಶರಣರ ವಚನಗಳಲ್ಲಿ ಲೌಕಿಕ ಹಾಗೂ ಪಾರಮಾರ್ಥಿಕ ಸತ್ಯದ ಸುಳಿವು ಇದೆ. ಕಾಯಕದಿಂದ ಗಳಿಸಿದ ಧನವನ್ನು ದಾಸೋಹದ ಮೂಲಕ ಜಗತ್ತಿನ ಒಳಿತಿಗೆ ಸದ್ವಿನಿಯೋಗ ಮಾಡಬೇಕು ಎಂದು ಅವರು ತಿಳಿಸಿದರು.
ಬಸವ ರತ್ನಮಾತಾಜಿ ಮಾತನಾಡಿ, ಶರಣರು ವಚನಗಳನ್ನು ರಚಿಸಿದ ಕಷ್ಟಕ್ಕಿಂತ ವಚನಗಳನ್ನು ಉಳಿಸಲು ಪಟ್ಟ ಶ್ರಮ ಅಧಿಕವಾದುದು. ಅಂತಹ ವಚನಗಳನ್ನು ಓದದೇ ಜೀವನದಲ್ಲಿ ಅನುಷ್ಟಾನಗೊಳಿಸಿದಿದ್ದರೆ ಸಮಾಜದ ದುರ್ದೈವ, ಸಮಾಜದಲ್ಲಿನ ಕತ್ತಲೆಯನ್ನು ಹೋಗಲಾಡಿಸಲು ಶರಣರ ವಚನಗಳು ದಾರಿದೀಪವಾಗಿವೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಸವಲಿಂಗ ಪ್ರಭು, ಪಟ್ಟಣದ ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ i. ಜಯದೇವ್, ಖಜಾಂಚಿ ಬೇಕರಿ ವಿ. ಶಿವಣ್ಣ, ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷರಾದ ಎಚ್.ಎಸ್. ರುದ್ರೇಶ್ ಮೂರ್ತಿ, ತಾಲೂಕು ಅಧ್ಯಕ್ಷ ಮ ಸುರೇಶ್ ಬಾಬು, ಅಕ್ಕನ ಬಳಗದ ವಿಮಲಾಂಬ, ಮೀನಾ ಕುಮಾರಿ, ಭ್ರಮರಾಂಬ, ಎಂ ಆರ್ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.


























