
ಕಲಬುರಗಿ:ಡಿ.5: ದೇಶ, ಸಮಾಜ ನಮಗೇನು ನೀಡಿದೆ ಎಂದು ಪ್ರಶ್ನಿಸುವುದಕ್ಕಿಂತ, ದೇಶ, ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂಬುದು ಪ್ರಮುಖ. ಯಾವದೇ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಜೀವನಕ್ಕಾಗಿಯೇ ಮೀಸಲಾದರೆ ಯಾವುದೇ ಪ್ರಯೋಜನೆಯಿಲ್ಲ. ವೈಯಕ್ತಿಕ ಜೀವನದ ಜೊತೆಗೆ ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರು ತಮ್ಮಿಂದಾದ ಏನಾದರು ಒಳಿತು ಮಾಡುವುದು, ಸಮಾಜ ಸೇವೆ ಸಲ್ಲಿಸುವ ಮನೋಭಾವನೆಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇತರರ ಜೀವನವನ್ನು ಸುಧಾರಿಸಲು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡಲು ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುವ ಸ್ವಯಂಸೇವಕರನ್ನು ಗೌರವಿಸುವುದು ದಿನದ ಉದ್ದೇಶವಾಗಿದೆ. ಸ್ವಯಂಸೇವಕ ಸಂಸ್ಥೆಗಳು ಮತ್ತು ವೈಯಕ್ತಿಕ ಸ್ವಯಂಸೇವಕರನ್ನು ಉತ್ತೇಜಿಸಲು, ಸ್ವಯಂಸೇವಕ ಪ್ರಯತ್ನಗಳನ್ನು ಬೆಂಬಲಿಸಲು, ಸರ್ಕಾರಗಳನ್ನು ಪೆÇ್ರೀತ್ಸಾಹಿಸಲು ಮತ್ತು ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಗೆ ಸ್ವಯಂಸೇವಕರ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ನಾವು ಜಗತ್ತನ್ನು ಬದಲಾಯಿಸಲು ಬಯಸಿದರೆ, ಅದು ನಮ್ಮಿಂದಲೇ ಪ್ರಾರಂಭಿಸಬೇಕು. ಇದಕ್ಕಾಗಿ ಸ್ವಯಂ ಸೇವಕತ್ವಕ್ಕಿಂತ ಉತ್ತಮ ಮಾರ್ಗವಿಲ್ಲ. ಬಡತನ, ಶಿಕ್ಷಣ, ಆರೋಗ್ಯ, ಹವಾಮಾನ ಬದಲಾವಣೆ ಮತ್ತು ವಿಪತ್ತು ಪರಿಹಾರದಂತಹ ನಿರ್ಣಾಯಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ವಯಂಸೇವಕರ ಕೊಡುಗೆಗಳನ್ನು ಗೌರವಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.






















