Home ಜಿಲ್ಲೆ ಕಲಬುರಗಿ ಬುದ್ಧನ ಚಿಂತನೆಗಳು ಮಾನವ ಕುಲಕ್ಕೆ ದಾರಿದೀಪ : ಪ್ರೊ. ರಮೇಶ್ ಲಂಡನಕರ್

ಬುದ್ಧನ ಚಿಂತನೆಗಳು ಮಾನವ ಕುಲಕ್ಕೆ ದಾರಿದೀಪ : ಪ್ರೊ. ರಮೇಶ್ ಲಂಡನಕರ್

ಕಲಬುರಗಿ :ಮೇ.2: ವಿವಿಧ ಕಾಲಘಟ್ಟಗಳಲ್ಲಿ ಆದರ್ಶ ಸಮಾಜ ಮತ್ತು ನಾಗರೀಕತೆ ಹುಟ್ಟಿಗೆ ಕಾರಣರಾದ ಅನೇಕ ತತ್ವಜ್ಞಾನಿಗಳು ಶಾಂತಿ, ಸತ್ಯ, ಪ್ರೀತಿ, ಕರುಣೆ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ್ದಾರೆ. ಬುದ್ಧನು ವೈಜ್ಞಾನಿಕ ಚಿಂತನೆಗಳು ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಮೇಶ್ ಲಂಡನಕರ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ರಾಧಾಕೃಷ್ಣ ಸಭಾಂಗಣದಲ್ಲಿ ಬುದ್ಧ ಪೂರ್ಣಿಮೆ ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಗವಾನ್ ಬುದ್ಧನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ದ್ವೇಷ ಮತ್ತು ಅಸೂಯೆಯಿಂದ ಮನುಷ್ಯ ಸುಖ, ಶಾಮತಿ ಮತ್ತು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ವರ್ಗ, ಜಾತಿ, ಕುಟುಂಭಗಳ ಮಧ್ಯೆ ದ್ವೇಷ ನಿಂತರೆ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ. ಜಗತ್ತಿನ ಪ್ರಬಲ ರಾಷ್ಟ್ರಗಳು ಯುದ್ಧ ಸಾಮಥ್ರ್ಯವನ್ನು ತೋರಿಸುತ್ತಿವೆ. ಬುದ್ಧನ ಶಾಂತಿ ಮತ್ತು ಪ್ರೀತಿ ತತ್ವದಿಂದ ಯುದ್ಧ ಅವಶ್ಯಕತೆಯಿಲ್ಲ. ಮಾನವ ಧರ್ಮ, ಶಾಂತಿ ಮತ್ತು ಸಹಕಾರದಿಂದ ಜಾಗತಿಕ ಶಾಂತಿ ಸ್ಥಾಪನೆ ಸಾಧ್ಯ. ಎಂದ ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಇಂದು ದೇಶದ ಅಭಿವೃದ್ಧಿಯಲ್ಲಿ ಶ್ರಮಜೀವಿಗಳ ಪಾತ್ರವನ್ನು ಗುರುತಿಸುವ ಮಹತ್ವದ ದಿನವಾಗಿದೆ. ದೇಶದ ಸಮಸ್ತ ಕಾರ್ಮಿಕ ಬಂಧುಗಳಿಗೆ ಶುಭ ಕೋರಿದರು.
ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್. ಟಿ. ಪೋತೆ ಮಾತನಾಡಿ ಬುದ್ಧ ಏಷ್ಯಾದ ಬೆಳಕು ಎಂದು ಕರೆದಿದ್ದಾರೆ. ಜಗತ್ತಿಗೆ ಬುದ್ಧನೇ ಬೆಳಕು ಎಂದು ಮನವರಿಕೆಯಾಗಿದೆ. ಶಾಕ್ಯ ಕುಲದ ಶುದ್ಧೋದನ ಮತ್ತು ಮಾಯಾದೇವಿ ಪುತ್ರನಾಗಿ ಸಿದ್ಧಾರ್ಥ ಗೌತಮ ಲುಂಬಿನಿ ವನದಲ್ಲಿ ಕ್ರಿ.ಪೂ. 563ರಲ್ಲಿ ವೈಶಾಕ ಮಾಸದ ಪೂರ್ಣಿಮೆ ದಿನ ಜನಿಸಿದ. ತಾಯಿ ನಿಧನ ನಂತರ ಸಾಕು ತಾಯಿ ಪ್ರಜಾಪತಿ ಗೌತಮಿ ಸಲುಹಿದರು. ಸಮಾಜದ ಜನರ ಕಷ್ಟ, ಕಾರ್ಪಣ್ಯ, ನೋವು, ದುಖಃಗಳಿಗೆ ಕಾರಣವೇನೆಂದು ಚಿಂತಿಸಿದ. ವಯೋವೃದ್ಧ, ರೋಗಿ ಮತ್ತು ಶವ ಕಂಡು ತಪಸ್ವಿಯಾಗಿ ಸತ್ಯ ಅರಿತು ಮಹಾಜ್ಞಾನಿಯಾಗಿ ಧರ್ಮ ಪ್ರಚಾರ ಮಾಡಿದ. ಆಸೆಯೇ ದುಖಃಕ್ಕೆ ಮೂಲವೆಂಬ ಸತ್ಯವನ್ನು ವಿಶ್ವಕ್ಕೆ ಸಾರಿದ. ಬುದ್ಧನು ಬೋಧಿಸಿದ. ಆಸೆಯೇ ದುಖಃಕ್ಕೆ ಮೂಲ, ಆಸೆಯನ್ನು ಗೆದ್ದರೆ ದುಖಃ ದೂರಾಗುತ್ತದೆ. ಅದಕ್ಕಾಗಿ ಪಂಚಶೀಲ ತತ್ವಗಳು ಮತ್ತು ಅಷ್ಟಾಂಗ ಮಾರ್ಗಗಳು ಅನುಸರಿಸಬೇಕು. ಮಾನವ ಕುಲದ ಜೀವನ ಸೌಖ್ಯ ಮತ್ತು ಮುಕ್ತಿಗೆ ಬುದ್ಧನ ತತ್ವ ಮತ್ತು ಜೀವನ ಸನ್ಮಾರ್ಗ ತೋರಿಸುತ್ತವೆ ಎಂದರು.
ವಾಣಿಜ್ಯ ನಿಕಾಯದ ಡೀನ್ ಹಾಗೂ ವಾಣಿಜ್ಯ ನಿಕಾಯದ ಮುಖ್ಯಸ್ಥ ಪ್ರೊ. ರಾಜನಾಳ್ಕರ್ ಲಕ್ಷ್ಮಣ ಮಾತನಾಡಿ ವಾಸ್ತವ ಸಮಾಜದಲ್ಲಿ ಧರ್ಮದ ಬಗ್ಗೆ ವಿಭಿನ್ನ ಅರ್ಥ ನೀಡಲಾಗುತ್ತಿದೆ. ಧರ್ಮವೆಂದರೆ ಶಾಂತಿ, ನೆಮ್ಮದಿ, ಸತ್ಯ, ನೀತಿ ಮತ್ತು ಮನುಷ್ಯ ಭಾವನೆ ಬೆಳೆಸುವುದು. ಸಂಘರ್ಷ, ಅಶಾಂತಿ, ತಲ್ಲಣ, ಭಯವನ್ನು ಬಿತ್ತುವುದಲ್ಲ. ತಪಸ್ಸಿನಿಂದ ಅಂತರಂಗವನ್ನು ಉತ್ತಮೀಕರಿಸಿಕೊಳ್ಳುವ ಮೂಲಕ ಬುದ್ಧನ ಮಾರ್ಗದಲ್ಲಿ ನಡೆದರೆ ನಮಗೆ ನಾವೇ ಬೆಳಕು ಕಾಣಬೇಕು ವಿನಹಃ, ಜಾತಿಯನ್ನು ಧರ್ಮವಾಗಿ ಬಿಂಬಿಸಬಾರದು. ಅಂತರಂಗದ ಒಳಿತಿನ ಬಗ್ಗೆ ಪುನಃ ಪುನಃ ಓದುವ, ಚಿಂತಿಸುವ, ಸರಿ ಮಾರ್ಗದಲ್ಲಿ ನಡೆಯುವ ಮೂಲಕ ಬುದ್ಧನ ವಿಚಾರಗಳನ್ನು ಮುನ್ನಲೆಗೆ ತರಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಪ್ರೊ. ದೇವಿದಾಸ ಮಾಲೆ, ಪ್ರೊ. ಜಿ.ಎಂ. ವಿದ್ಯಾಸಾಗರ್, ಪ್ರೊ. ಬಸವರಾಜ ಸಣ್ಣಕ್ಕಿ, ಡಾ. ಹನುಮಂತ ಜಂಗೆ, ಅಶೋಕ ಜಿಗಳಮಡಿ, ಜಿ. ರಾಜಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷಾ ವಿಭಾಗದ ಅಧೀಕ್ಷಕ ಬಿ. ಎಂ. ರುದ್ರವಾಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

ಭಾರತಕ್ಕೆ ಕಡಿಮೆ ಅಪಾಯವಿದೆಯೆಂದರೆ ಅದು ಬುದ್ಧನಿಂದ ಮಾತ್ರ. ಈ ನೆಲದ ಯುದ್ಧ ವಿರೋಧಿ ಚಿಂತನೆಗಳಿವೆ ಎಂದರೆ ಅದಕ್ಕೆ ಬೌದ್ಧ ಧರ್ಮ ಕಾರಣ. ಜಗತ್ತಿನ ಶಾಂತಿಗೆ ಬುದ್ಧ ಬೇಕು. ಅಹಿಂಸೆ ತ್ಯಜಿಸುತ್ತಿಲ್ಲ. ಅಸಮಾನತೆ ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ಮತ್ತು ಸಹೋದರತೆಯನ್ನು ಸಮಾಜ ಒಪ್ಪುತ್ತಿಲ್ಲ. ನಾನು ಮಾರ್ಗದಾತನೇ ಹೊರತು ದೇವರಲ್ಲ ಎಂದಿರುವ ಬುದ್ಧ ತನ್ನ ವಿಚಾರಗಳನ್ನು ಪಾಲಿಸಿ, ಪುರಷ್ಕರಿಸಿ, ಚಿಂತಿಸಿ ಎಂದು ಪ್ರಜಾಪ್ರಭುತ್ವ ತತ್ವವನ್ನು ಪ್ರತಿದಿಸಿದ್ದಾರೆ. ರೋಹಿಣಿ ನದಿ ನೀರಿಗಾಗಿ ಯುದ್ಧವನ್ನೇ ತ್ಯಜಿಸಿದ. ಕಸ ಗುಡಿಸಿದ ವ್ಯಕ್ತಿಯನ್ನು ಅಪ್ಪಿಕೊಂಡ. ಎಲ್ಲಾ ವರ್ಗದ ಜನರು, ಮಹಿಳೆಯರನ್ನು ಬುದ್ಧನು ಸಂಘಕ್ಕೆ ಸ್ವಾಗತಿಸಿದ. ಡಾ. ಬಿ. ಆರ್. ಅಂಬೇಡ್ಕರ್ ಅವರು ಬರೆದಿರುವ ಬುದ್ಧ ಮತ್ತು ಆತನ ಧಮ್ಮ ಕೃತಿಯಲ್ಲಿ ಬುದ್ಧನ ನೈಜ ವಿಚಾರಗಳಿವೆ. ಬುದ್ಧ, ಬಸವಣ್ಣನ ಚಿಂತನೆಗಳನ್ನು ಸಂವಿಧಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅಳವಡಿಸಿ ಶ್ರೇಷ್ಠ ಸಂವಿಧಾನ ನೀಡಿದ್ದಾರೆ.

  • ಪ್ರೊ. ಎಚ್. ಟಿ. ಪೊತೆ
    ಡೀನರು, ಕಲಾ ನಿಕಾಯ