ಕೋಲಾರದಲ್ಲಿ ಬುದ್ಧನ ಬೆಳಕು ಉದ್ಘಾಟನೆ

ಕೋಲಾರ,ಜ,೨-ಪ್ರೀತಿ, ಸಹನೆ, ತಾಳ್ಮೆ, ಸಮಾನತೆಯ ಹಾದಿಯನ್ನು ಬೋಧಿಸಿದ ಬುದ್ಧನ ಹಾದಿಯು ಸರ್ವಕಾಲಿಕ. ಎಲ್ಲದಕ್ಕೂ ಆಸೆಗಳೇ ಮೂಲವೆಂದು ತಿಳಿದ ಬುದ್ದನು ಅಷ್ಟಾಂಗ ಮಾರ್ಗ ಮತ್ತು ಪಂಚಶೀಲ ಮಾರ್ಗವನ್ನು ನಮಗೆ ನೀಡಿದ್ದಾರೆ. ಪಂಚಶೀಲವು ಬಹಳ ಸುಲಭ ಮಾರ್ಗವಾಗಿದ್ದು, ಜೀವಹಿಂಸೆ, ಕಳ್ಳತನ, ಅಶ್ಲೀಲ ಲೈಂಗಿಕ ಚಟುವಟಿಕೆ, ಸುಳ್ಳು, ಮಾದಕ ಸೇವೆಯಿಂದ ದೂರವಿರಲು ಬುದ್ದ ತಿಳಿಸಿದನು ಎಂದು ದಲಿತ ಹಿರಿಯ ಮುಖಂಡ ಪಂಡಿತ್ ಮುನಿವೆಂಕಟಪ್ಪ ತಿಳಿಸಿದರು.


ಕೋಲಾರ ತಾಲ್ಲೂಕು ಬೀರಮಾನಹಳ್ಳಿ ಸಮೀಪ ಬುದ್ಧ ತತ್ವಗಳನ್ನು ನಮ್ಮ ಜಿಲ್ಲೆಯಲ್ಲಿ ಹರಡುವ ಉದ್ದೇಶದಿಂದ ಬುದ್ಧ ಮಂದಿರ ನಿರ್ಮಾಣ ಪ್ರಾರಂಭವಾಗಿರುವ ಬುದ್ದನ ಬೆಳಕು ಎಂಬ ಬುದ್ದವಿಹಾರವನ್ನು ಬುದ್ಧನ ಪ್ರವಚನ ನೀಡುವ ಮೂಲಕ ಉದ್ಘಾಟಿಸಿದರು. ನಂತರ ಬುದ್ದನ ಪ್ರತಿಮೆಗೆ ಪುಷ್ಪಾರ್ಚನೆಯನ್ನು ಮಾಡಲಾಯಿತು.


ಬುದ್ದನು ಈ ದೇಶದ ಸಂಸ್ಕೃತಿಯ ಪ್ರತಿರೂಪ. ಬುದ್ದನ ತತ್ವಗಳನ್ನು ಜೀವನದಲ್ಲಿ ಯುವ ಜನತೆ ಅಳವಡಿಸಿಕೊಳ್ಳಬೇಕು. ಬುದ್ದನು ಬೌದ್ಧ ಬುಕ್ಕುಗಳಿಗೆ ಮಾಂಸಹಾರವನ್ನು ನೀಡದಂತೆ ಹೇಳಿದ್ದನು. ಬೇರೆಯವರಿಗೆ ಯಾವುದೇ ನಿರ್ಭಂಧ ಹೇರಲಿಲ್ಲ ಹಾಗಾಗಿ ಬುದ್ದನ ಮಾರ್ಗವನ್ನು ವಿಶ್ವದ ಹಲವು ದೇಶಗಳು ಅಳವಡಿಸಿಕೊಂಡಿದೆ ಎಂದರು. ಬುದ್ದನು ಹುಟ್ಟಿದ ನಾಡಿನಲ್ಲಿ ಬೌದ್ಧ ದರ್ಮವು ಕ್ಷೀಣಿಸಿದೆ. ಹಾಗಾಗಿ ಬುದ್ಧ ದಮ್ಮವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಲು ತಿಳಿಸಿದರು.


ಹಿರಿಯ ದಲಿತ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ ೧೮೧೮ರಲ್ಲಿ ಜನವರಿ ೧ ರಂದು ಕೊರೆಂಗಾವ್ ಎಂಬ ಸ್ಥಳದಲ್ಲಿ ಅಸಮಾನತೆ, ಅವಮಾನದಿಂದ ಬೇಸತ್ತ ದಲಿತರು ಮಾಡಿದ ಕ್ರಾಂತಿ ಮಹಾರ್ ಸೈನ್ಯವು ಪೇಶ್ವೆಗಳ ಆಡಳಿತದೊಂದಿಗೆ ತಿರುಗಿ ಬಿದ್ದು ೨ನೇ ಬಾಜಿರಾಯನ ೨೮ ಸಾವಿರ ಸೈನ್ಯವನ್ನು ಭೀಮಾನದಿಯ ತೀರದಲ್ಲಿ ಸತತ ೧೨ ಗಂಟೆಗಳ ಕಾಲ ಯುದ್ಧಮಾಡಿ ಸೋಲಿಸಿ ವಿಜಯದ ಪತಾಕೆ ಹಾರಿಸಿದರು. ಕೊನೆಯದಾಗಿ ಭೀಮಾ ನದಿಯ ನೀರು ಕುಡಿದು ಜೈ ಭೀಮ್ ಎಂದು ಉದ್ಘರಿಸಿದರು. ಯುದ್ದದಲ್ಲಿ ವೀರಾವೇಶದಿಂದ ಹೋರಾಡಿ ಮಡಿದ ೨೨ ಜನ ಮಹಾರ್ ಸೈನಿಕರ ನೆನಪಿನಾರ್ಥ ಕೋರೆಗಾವ್ ಎಂಬ ಸ್ಥಳದಲ್ಲಿ ವಿಜಯ ಸ್ಥಂಭ ಸ್ಥಾಪಿಸಿದ್ದು, ಇದು ದಲಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದರು. ೧೯೩೧ರಲ್ಲಿ ದುಂಡುಮೇಜಿನ ಪರಿಷತ್‌ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಈ ವೀರ ಯೋಧರ ಬಗ್ಗೆ ಪ್ರಸ್ತಾಪಿಸಿ ಪ್ರತ್ಯೇಕ ಮಹಾರ್ ರೆಜಿಮೆಂಟ್ ಸ್ಥಾಪನೆಗೆ ಕಾರಣರಾದರು. ಅಂದಿನಿಂದ ಪ್ರತಿ ವರ್ಷ ಕೋರೆಗಾವ್‌ಗೆ ಲಕ್ಷಾಂತರ ಜನರು ಆ ವೀರ ಯೋಧರಿಗೆ ನಮನ ಸಲ್ಲಿಸುತ್ತಾರೆ ಎಂದರು.


ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ, ಹೆಚ್.ಎನ್.ಮೂರ್ತಿ, ಮುನಿವೆಂಕಟಸ್ವಾಮಿ, ನಾರಾಯಣವಿಭೂ, ಅಂಬೇಡ್ಕರ್ ನಗರ ವಿಜಿಜುಮಾರ್, ಜಯನಗರ ಚಿನ್ನ, ಪ್ರಕಾಶ್, ವೇಣು, ಗಾಂಧಿನಗರ ಶ್ರೀಕಾಂತ್, ಬುದ್ದನ ಬೆಳಕು ಪದಾಧಿಕಾರಿಗಳಾದ ಪ್ರಸನ್ನ, ಅಶ್ವಿನ್, ಟಮಕ ಸುರೇಶ್, ಚಂದ್ರು (ಚಿನ್ಷು), ಸಂದೀಪ್, ಕಾರ್ತಿಕ್, ವಿನಯ್, ಮಾನಸ್, ನವೀನ್, ಚಂದ್ರಿಕಾ, ರುಚಿತ ಭಾಗವಹಿಸಿದ್ದರು.