
ಕಲಬುರಗಿ: ಮೇ.18:ಬುದ್ಧ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಮಾನವ ಸಮಾಜಕ್ಕೆ ನೀಡಿದ ಸಮಾನತೆ, ಶಿಕ್ಷಣ ಮತ್ತು ಮಾನವೀಯತೆಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರಿನ ಉರಿಲಿಂಗಿ ಪೆದ್ದಿಮಠದ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮಿಜೀ ಹೇಳಿದರು.
ನಗರದ ಎಂ.ಎಸ್.ಕೆ. ಮಿಲ್ ಜಿ.ಡಿ.ಎ. ವಸತಿಗೃಹ ಬಡಾವಣೆಯ ಉದ್ಯಾನವನದಲ್ಲಿ, ಸಿ.ಐ.ಬಿ. ಕಾಲೋನಿ ಹತ್ತಿರ ಭಾನುವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ ಹಾಗೂ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಬುದ್ಧನು ಶಾಂತಿ ಮತ್ತು ಕರುಣೆಯ ಮಾರ್ಗ ತೋರಿದರೆ, ಬಸವಣ್ಣ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಡಾ. ಅಂಬೇಡ್ಕರ್ ಶಿಕ್ಷಣದ ಮೂಲಕ ಶೋಷಿತ ಸಮುದಾಯಗಳಿಗೆ ಹಕ್ಕು ಮತ್ತು ಗೌರವ ತಂದುಕೊಟ್ಟ ಮಹಾನ್ ನಾಯಕರು. ಅವರ ತತ್ವಗಳನ್ನು ಪಾಲಿಸುವ ಮೂಲಕ ಮಾತ್ರ ಸಮಾನತೆಯ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಬುದ್ಧ, ಬಸವ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಂತ ಅಗತ್ಯವಾಗಿವೆ ಎಂದು ಹೇಳಿದರು.
ಸಮಾಜದಲ್ಲಿ ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಈ ಮಹನೀಯರ ಕೊಡುಗೆ ಅಪಾರವಾಗಿದೆ. ಶೋಷಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ನಡೆಸಿದ ಹೋರಾಟ ಇಂದಿಗೂ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಇಂದಿನ ಯುವಜನತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ಮೂಲಕವೇ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಸಾಧ್ಯ. ಸಂಘಟಿತ ಹೋರಾಟದಿಂದ ಮಾತ್ರ ಸಮಾಜದ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಲುಂಬಿನಿ ಬುದ್ಧವಿಹಾರದ ಪೂಜ್ಯ ಭಂತೆ ನಾಗರತ್ನ ಅವರು ಭಾಗವಹಿಸಿದ್ದರು. ರಾಯಚೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ ವಿಶೇಷ ಉಪನ್ಯಾಸ ನೀಡಿದರು.
ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ವೈಜನಾಥ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಮದಾನಿ ಪ್ರಸ್ತಾವಿಕವಾಗಿ ಮಾತನಾಡಿದರು. ಡಾ. ಮಾರುತಿ ಬೇಂದ್ರೆ ಕಾರ್ಯಕ್ರಮ ನಿರೂಪಿಸಿದರು. ದಶರಥ ವಂದನಾರ್ಪಣೆ ಸಲ್ಲಿಸಿದರು.
ಎಂ.ಎಸ್.ಕೆ. ಮಿಲ್ ಜಿ.ಡಿ.ಎ. ವಸತಿಗೃಹ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದ ವ್ಯವಸ್ಥೆ ನಿರ್ವಹಿಸಿದರು.


























