ಮನೆ ಹಂಚಿಕೆಗೆ ಲಂಚ, ಜಮೀರ್ ನಿರಾಕರಣೆ

ಬೆಂಗಳೂರು, ಜೂ. ೨೪- ವಸತಿ ಯೋಜನೆ ಇಲಾಖೆಯಲ್ಲಿ ಮನೆಗಳ ಹಂಚಿಕೆಗೆ ದುಡ್ಡು ಪಡೆಯಲಾಗುತ್ತಿದೆ ಎಂಬ ಶಾಸಕ ಬಿ.ಆರ್. ಪಾಟೀಲ್ ರವರ ಆರೋಪವನ್ನು ತಳ್ಳಿ ಹಾಕಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್, ಬಿ.ಆರ್. ಪಾಟೀಲ್ ಅವರು ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಬಡವರ ಮನೆಗಳ ಹಂಚಿಕೆಯಲ್ಲಿ ದುಡ್ಡು ತೆಗೆದುಕೊಂಡರೆ ನಮ್ಮ ಕುಟುಂಬಕ್ಕೆ ಒಳ್ಳೆಯದಾಗುತ್ತದೆಯೇ, ಆ ರೀತಿ ದುಡ್ಡು ತೆಗೆದುಕೊಂಡರೆ ಅವರ ಮಕ್ಕಳು ಹುಳ ಬಿದ್ದು ಸಾಯುತ್ತಾರೆ ಎಂದು ಭಾವುಕರಾದರು.


ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬಿ.ಆರ್. ಪಾಟೀಲ್ ಹಿರಿಯರು. ಅವರ ಆರೋಪದ ಬಗ್ಗೆ ತನಿಖೆಯಾಗಲಿ. ಅವರು ನನ್ನ ಹೆಸರನ್ನು ಪ್ರಸ್ತಾಪಿಸಿಲ್ಲ. ನಾನು ಆರೋಪಿ ಎಂದು ಸಾಬೀತಾದರೆ ೨೪ ಗಂಟೆಯೊಳಗೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.


ನಾನು ಸತ್ಯ ಹರಿಶ್ಚಂದ್ರನೆಂದು ಹೇಳುತ್ತಿಲ್ಲ. ಆದರೆ ಬಡವರ ದುಡ್ಡು ಹೊಡೆಯುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ ಎಂದು ಹೇಳಿದರು.


ಯಾರು ದುಡ್ಡು ಪಡೆದು ಮನೆ ಕೊಟ್ಟಿದ್ದಾರೆ ಎಂಬ ಬಗ್ಗೆ ಸಾಕ್ಷ್ಯಗಳನ್ನು ಕೊಡಬೇಕು. ಆ ಬಗ್ಗೆ ತನಿಖೆಯಾಗಲಿ. ಬಿ.ಆರ್. ಪಾಟೀಲ್ ಸಚಿವರು ಹಣ ಪಡೆದಿದ್ದಾರೆ ಎಂದು ಆರೋಪ ಮಾಡಿಲ್ಲ. ಯಾರು ಹಣ ಪಡೆದಿದ್ದಾರೋ ಎಲ್ಲದರ ಬಗ್ಗೆಯೂ ತನಿಖೆಯಾಗಲಿ. ನಾನು ಯಾರ ಬಳಿಯೂ ಹಣ ಪಡೆದು ಮನೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.


ಬಡವರ ಹಣ ಪಡೆದು ಮನೆ ನೀಡಿದರೆ ನಮ್ಮ ಕುಟುಂಬಕ್ಕೆ, ನಮ್ಮ ಮಕ್ಕಳಿಗೆ ಒಳ್ಳೆಯದಾಗುತ್ತಾ, ಯಾರೇ ದುಡ್ಡು ಪಡೆದು ಮನೆ ಕೊಟ್ಟಿದ್ದರೆ ಹುಳ ಬಿದ್ದು ಸಾಯುತ್ತಾರೆ ಎಂದು ಜಮೀರ್ ಪುನರುಚ್ಚರಿಸಿದರು.


ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದಿದ್ದರೆ ನನ್ನ ಮಕ್ಕಳಿಗೆ ಶಾಪ ತಟ್ಟಲಿ. ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವುದರಲ್ಲಿ ನನ್ನ ಕೈವಾಡ ಇರುವುದು ಸಾಬೀತಾದರೆ ನಾನೇ ರಾಜೀನಾಮೆ ನೀಡುತ್ತೇನೆ. ಬಿಜೆಪಿಗರು ಹೇಳುವುದೇ ಬೇಡ. ಆರೋಪ ಸಾಬೀತಾದರೆ ನಾನೇ ರಾಜೀನಾಮೆ ಕೊಡುತ್ತೇನೆ ಎಂದರು.


ನಾನು ದುಡ್ಡು ಪಡೆದು ಮನೆ ಕೊಟ್ಟಿರುವುದನ್ನು ಬಿಜೆಪಿಯವರು ಸಾಬೀತು ಮಾಡಲಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ ಅವರು, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರಿಗೆ ಮನೆ ಕೊಡಲಿಲ್ಲ. ನಾನು ಬಂದ ಮೇಲೆ ಮನೆ ಹಂಚಿಕೆ ಮಾಡುತ್ತಿದ್ದೇನೆ. ಇವತ್ತು ಬಿಜೆಪಿಯವರು ಬಡವರ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.


ಶಾಸಕ ಬಿ.ಆರ್. ಪಾಟೀಲ್ ಆರೋಪದ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದ್ದೇನೆ. ಬಡವರಿಂದ ಹಣ ಪಡೆಯುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನಾನು ನಮ್ಮ ಇಲಾಖೆಯ ಎಲ್ಲ ಮಾಹಿತಿಗಳನ್ನು ಕೊಟ್ಟಿದ್ದೇನೆ. ಬಿ.ಆರ್. ಪಾಟೀಲ್ ಆರೋಪ ಸಂಬಂಧ ಮುಖ್ಯಮಂತ್ರಿಗಳಿಗೆ ವಿವರಣೆಯನ್ನು ಕೊಟ್ಟಿದ್ದೇನೆ ಎಂದು ಹೇಳಿದರು.


ಕಳೆದ ೪ ವರ್ಷಗಳಿಂದ ಹೊಸ ಮನೆಗಳನ್ನು ಕೊಟ್ಟಿಲ್ಲ. ಈಗ ೯ ಲಕ್ಷ ಮನೆಗಳ ನಿರ್ಮಾಣವಾಗುತ್ತಿದೆ. ಪಂಚಾಯ್ತಿ ಮಟ್ಟದಲ್ಲಿ ಭ್ರಷ್ಟಾಚಾರ ನಡೆದರೆ ನಮಗೆ ಹೇಗೆ ಗೊತ್ತಾಗುತ್ತದೆ. ಈ ಬಗ್ಗೆ ಪಾಟೀಲ್‌ರವರೇ ಹೇಳಬೇಕು ಎಂದು ಜಮೀರ್ ಅಹಮದ್ ಖಾನ್ ಹೇಳಿದರು.


ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಬಡವರಿಗೆ ೧೪ ಲಕ್ಷ ಮನೆಗಳನ್ನು ಹಂಚಿಕೆ ಮಾಡಿದ್ದರು. ನಾವು ಕಳೆದ ೨ ವರ್ಷದಲ್ಲಿ ೫.೮ ಲಕ್ಷ ಮನೆಗಳನ್ನು ನೀಡಿದ್ದೇವೆ. ಮನೆಗಳ ಹಂಚಿಕೆಗೆ ಶಾಸಕರಿಂದ ಬಹಳ ಒತ್ತಡ ಇತ್ತು. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದೆ. ಆಗ ಮುಖ್ಯಮಂತ್ರಿಗಳು ೧.೨೦ ಲಕ್ಷ ಅನುದಾನದ ಬದಲು ೩.೫ ಲಕ್ಷ ಅನುದಾನ ಕೊಡಲು ಒಪ್ಪಿದರು. ಒಂದು ಮನೆ ಕಟ್ಟ ಬೇಕಾದರೆ ೭.೫ ಲಕ್ಷ ಆಗುತ್ತದೆ. ೧.೫ ಲಕ್ಷ ಕೇಂದ್ರದಿಂದ ಬರುತ್ತದೆ. ಅದಕ್ಕೆ ಜಿಎಸ್‌ಟಿ ಹಾಕಿ ಮತ್ತೆ ೧.೩ ಲಕ್ಷ ವಾಪಸ್ ಪಡೆಯುತ್ತಾರೆ ಎಂದು ದೂರಿದರು.


ನಾನು ವಸತಿ ಸಚಿವನಾದ ಮೇಲೆ ಎಲ್ಲ ಶಾಸಕರಿಗೂ ಮನೆ ಹಂಚಿದ್ದೇನೆ. ಬಿ.ಆರ್. ಪಾಟೀಲ್ ಅವರು ೨ ಸಾವಿರ ಮನೆಗಳನ್ನು ಕೇಳಿದ್ದರು. ನಾವು ೯೫೦ ಮನೆಗಳನ್ನು ಕೊಟ್ಟಿದ್ದೇವೆ. ಚನ್ನಪಟ್ಟಣಕ್ಕೆ ೫ ಸಾವಿರ ಮನೆ ಕೊಟ್ಟಿದ್ದೇನೆ. ರಾಮನಗರ ಜಿಲ್ಲೆಗೆ ೩ ಸಾವಿರ ಮನೆ ಕೊಟ್ಟಿದ್ದೇನೆ ಎಂದು ಜಮೀರ್ ಅಹಮದ್ ಖಾನ್ ಮನೆ ಹಂಚಿಕೆಯ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.