
ಕಲಬುರಗಿ,ಫೆ 3: ಯಾವುದೇ ಆಸ್ತಿ, ಅಂತಸ್ತು, ಶ್ರೀಮಂತಿಕೆ ನೋಡದೇ ದುಡಿದು ಬದುಕುವ, ಕುಟುಂಬದ ಜವಾಬ್ದಾರಿ ಹೊರಲು ಸಿದ್ಧನಿರುವ ವರನಿದ್ದರೆ, ಕನ್ಯೆ ಕೊಟ್ಟು ಮದುವೆ ಮಾಡಿಕೊಡಿ ಎಂದು ಸಿದ್ದಿ ಮಾರುತಿ ದೇವಸ್ಥಾನದ ಮುಖ್ಯ ಅರ್ಚಕರೂ ಆದ ವಿಪ್ರ ಸಮಾಜದ ಹಿರಿಯ ಮುಖಂಡ ನಾರಾಯಣಾಚಾರ್ಯ ಕಮಲಾಪುರ ಹೇಳಿದರು.
ಕಲ್ಯಾಣಮಸ್ತು ಬ್ರಾಹ್ಮಣ ವಧು-ವರರ ಮಾಹಿತಿ ಕೇಂದ್ರ ನೇತೃತ್ವದಲ್ಲಿ ಬ್ರಾಹ್ಮಿನ್ ಆರ್ಗನೈಜೇಷನ್ ಆಫ್ ಇಂಡಿಯಾ(ಬಿಒಐ) ಕಲಬುರಗಿ ಘಟಕದ ಸಹಯೋಗದಲ್ಲಿ ನಗರದ ಶಹಾಬಾದ್ ಕ್ರಾಸ್ ರಿಂಗರಸ್ತೆಯ ವಿಸಿಕೆ ಟವರ್ ಬಳಿಯಿರುವ ಉತ್ಸವ ಫಂಕ್ಷನ್ ಹಾಲ್‍ನಲ್ಲಿ ಸೋಮವಾರ ಆಯೋಜಿಸಿದ್ದ ಬ್ರಾಹ್ಮಣ ವಧು-ವರರ ಬೃಹತ್ ಸಮಾಗಮ ಉದ್ಘಾಟಿಸಿದ ಅವರು, ಕುಟುಂಬ ನೆಮ್ಮದಿಯಿಂದ ಇರಬೇಕಾದರೆ, ಸಕಾಲಕ್ಕೆ ಮದುವೆ ಮಾಡಬೇಕು. ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಬ್ರಾಹ್ಮಣ ಸಮಾಜ ಶೋಚನೀಯ ಸ್ಥಿತಿಯಲ್ಲಿದೆ. ಎಲ್ಲ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯದ ಸಂಖ್ಯೆ ಕಡಿಮೆಯಾಗುತ್ತಿದೆ. ಐಎಎಸ್, ಐಪಿಎಸ್ ಮೊದಲಾದ ಉನ್ನತ ಅಭ್ಯಾಸ ಮಾಡಲು ನಮ್ಮ ಯುವಜನಾಂಗದ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ಯಾಪಿತೃಗಳೆಲ್ಲರೂ ಬ್ರಾಹ್ಮಣ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ದುಡಿದು ಕುಟುಂಬವನ್ನು ನಿರ್ವಹಿಸುವ ಶಕ್ತಿ ಬೆಳೆಸಿಕೊಂಡ ಹುಡುಗರಿಗೆ ಹೆಣ್ಣು ಕೊಟ್ಟು ಮದುವೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಹಿರಿಯ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಮಾತನಾಡಿ, ಈ ಕಾಲದಲ್ಲಿ ಜನಸಂಖ್ಯೆ ನೋಡಿ, ಸಮುದಾಯ ಗುರುತಿಸುವ ವಾತಾವರಣ ನಿರ್ಮಾಣವಾಗಿದೆ. ಇಂಥ ಸ್ಥಿತಿಯಲ್ಲಿ ಬ್ರಾಹ್ಮಣ ಒಳ ಪಂಗಡಗಳ ಗೋಜಿಗೆ ಹೋಗದೇ ಎಲ್ಲ ಬ್ರಾಹ್ಮಣರು ಒಂದೇ ಎಂಬ ಭಾವನೆಯಿಂದ ಪರಸ್ಪರ ಸಮುದಾಯದ ವರ-ಕನ್ಯೆ, ಕೊಡುವ-ಸ್ವೀಕರಿಸುವ ವಾತಾವರಣ ಉಂಟು ಮಾಡಬೇಕಾಗಿದೆ. ಇದರಿಂದ ಸಮಾಜಕ್ಕೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಬಿಒಐ ಮುಖಂಡ ಸತ್ಯನಾರಾಯಣರಾವ ಮಾತನಾಡಿದರು.
ಬಿಒಐ ಜಿಲ್ಲಾಧ್ಯಕ್ಷ ವೆಂಕಟೇಶ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಾಗಮದಲ್ಲಿ ಸಮಾಜದ ಹಿರಿಯರಾದ ಚಂದ್ರಕಾಂತ ಕುಲಕರ್ಣಿ, ಪಾಂಡುರಂಗರಾವ ಕಂಪ್ಲಿ, ಮುರಳೀಧರ ಕರಲಗಿಕರ್, ರಾಜೀವ ಕುಲಕರ್ಣಿ, ಜನಕ ಕುಲಕರ್ಣಿ, ಗಿರೀಶ ಕುಲಕರ್ಣಿ, ವಿಜಯಕುಮಾರ ಕೀಲಿ, ವೆಂಕಟೇಶ ಕುಲಕರ್ಣಿ ಚಿತ್ತಾಪುರ, ಬಿ.ಜಿ. ದೇಶಪಾಂಡೆ, ಶ್ರೀರಂಗ ಕರಲಗಿಕರ್, ರಾಘವೇಂದ್ರ ಪದಕಿ, ದಾಮೋದರ ಕುಲಕರ್ಣಿ, ವಿರೇಶ ಕುಲಕರ್ಣಿ, ಗುರುರಾಜ ಜೋಶಿ ನೆಲೋಗಿ, ರಮಾಕಾಂತ ಕುಲಕರ್ಣಿ, ದಿಲೀಪ್ ಕುಲಕರ್ಣಿ, ಸುಧಾಕರ್ ಉಡಬಾಳ್ಕರ್ ಮನೀಷಾ ಕುಲಕರ್ಣಿ, ಅನಿತಾ ಸುಬೇದಾರ್, ರಾಜಶ್ರೀ ಕುಲಕರ್ಣಿ, ಸುಮಂಗಲಾ ಚಕ್ರವರ್ತಿ, ಸೇರಿ ನೂರಾರು ವಧು-ವರರು ಹಾಗೂ ಪಾಲಕರು ಸಮಾಗಮದಲ್ಲಿ ಭಾಗವಹಿಸಿದ್ದರು. ಕಾವೇರಿ ಜಿಡಗಿಕರ್ ಪ್ರಾರ್ಥಿಸಿದರು. ಲಕ್ಷ್ಮೀ ಕಾಂತ ಖಣದಾಳಕರ್ ನಿರೂಪಿಸಿದರು.
ಸಮಾಜದ ಹಿತ ಮುಖ್ಯ
ಬಿಒಐ ರಾಜ್ಯಾಧ್ಯಕ್ಷ ರವೀಂದ್ರ ಮಾತನಾಡಿ, ಕಲಬುರಗಿಯಲ್ಲಿ ಈ ರೀತಿಯ ಸಮಾಗಮ ಈ ಹಿಂದೆ ಆಗಿರಲಿಲ್ಲ. ಸಮಾಜದ ಹಿರಿಯರು ಇದನ್ನು ಸಾಧ್ಯವಾಗಿಸಿದ್ದಾರೆ. ವರಗಳಿಗಿಂತಲೂ ಕನ್ಯೆಯರ ಬೇಡಿಕೆಗಳು ಹೆಚ್ಚಾಗಿವೆ. ಹೆಣ್ಣು ಮಕ್ಕಳ ಸಂಖ್ಯಾಬಲ ಕುಸಿತದಿಂದಾಗಿ ಈ ರೀತಿಯ ವ್ಯತ್ಯಾಸ ಉಂಟಾಗಿದೆ. ಕುಟುಂಬದ ಸ್ವಾಸ್ಥ??ಕ್ಕಾಗಿ, ಸಮಾಜದ ಹಿತಕ್ಕಾಗಿ ಕೆಲವು ಸಣ್ಣಪುಟ್ಟ ವಿಚಾರಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಅಂದಾಗ ಮಾತ್ರ ಸಮಾಜಕ್ಕೆ ಒಳಿತಾಗುತ್ತದೆ ಎಂದರು.




























