
ಬೀದರ್: ಈ ತಿಂಗಳ 30ರಂದು ಬೆಳಿಗ್ಗೆ 11 ಗಂಟೆಗೆ ಪ್ರತಾಪನಗರದಲ್ಲಿರುವ ಬೆಲ್ದಾಳೆ ಕನ್ವೆನಶನ್ ಹಾಲ್‍ನಲ್ಲಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ಬೀದರ್ ಜಿಲ್ಲಾ ಆರ್ಯ ಈಡಿಗ ಸಮಾಜಗಳ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ, ಮಾಜಿ ಮುಖ್ಯಮಂತ್ರಿ ದಿ.ಡಿ ದೇವರಾಜ ಅರಸು ಅವರ ಜಯಂತಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ ಜೊತೆಗೆ ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಾ.ರಾಜಶೇಖರ ಸೇಡಂಕರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಅಂದು ಬೆಳಿಗ್ಗೆ 9 ಗಂಟೆಗೆ ನಗರದ ಶಿವಾಜಿ ಚೌಕ್‍ನಿಂದ ಅಲಂಕೃತ ರಥದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದೆ. ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಸಾಯಿ ಶಾಲೆಯ ಆವರಣದಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ ಎಂದವರು ಹೇಳಿದರು.
ಹಿಂದೆ ಪ್ರತ್ಯೇಕ ಸಮುದಾಯಗಳು ಆಚರಿಸುತ್ತಿದ್ದ ನಾರಾಯಣ ಗುರು ಹಾಗೂ ದೇವರಾಜ ಅರಸು ಜಯಂತಿಯನ್ನು ಈ ಬಾರಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ ಸಮುದಾಯಗಳು ಒಗ್ಗೂಡಿ ಆಚರಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಅಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನಾರಾಯಣ ಗುರು ಹಾಗೂ ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಗುವುದು. ತಾನು ಅಧ್ಯಕ್ಷತೆ ವಹಿಸಲಿದ್ದು, ನವದೆಹಲಿಯ ಅಹಿಂದ ಮುಖಂಡ ರಾಜೇಶ್ ಅಲೋರಿಯಾ, ಮಾಜಿ ಸಚಿವ ರಹೀಮ್ ಖಾನ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಮಾತನಾಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿಗಣತಿ) ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಶೋಷಿತ ಸಮುದಾಯಗಳ ಒಕ್ಕೂಟದ ಸಮಾವೇಶ ಸಹ ಆಯೋಜಿಸಲಾಗಿದೆ. 2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನ್ಯಾಯವಾದಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲು ಆದೇಶಿಸಿತ್ತು. ವರದಿ ಸಿದ್ಧವಾಗುವ ವೇಳೆಗೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅದು ಮುಂದಿನ ಹಂತಕ್ಕೆ ಸಾಗಲಿಲ್ಲ. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳ ಅವಧಿಯಲ್ಲಿಯೂ ವರದಿ ಸ್ವೀಕಾರ ಮತ್ತು ಬಿಡುಗಡೆ ಕುರಿತು ನಿರ್ಧಾರವಾಗಿರಲಿಲ್ಲ ಎಂದು ಬೆಲ್ದಾರ್ ಹೇಳಿದರು.
ಒಕ್ಕೂಟದ ಗೌರವಾಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿ, 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಮಧುಸೂಧನ್ ನಾಯಕ್ ಅವರ ನೇತೃತ್ವದಲ್ಲಿ ವರದಿ ಸಿದ್ಧವಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಸಾರ್ವಜನಿಕಗೊಳಿಸಿ, ಅದರ ಆಧಾರದ ಮೇಲೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.7 ಹಾಗೂ ಹಿಂದುಳಿದ ವರ್ಗಗಳಿಗೆ ಶೇ.40ರಷ್ಟು ಮೀಸಲಾತಿ ಕಲ್ಪಿಸಬೇಕು. ಸಂವಿಧಾನದ ಆಶಯದಂತೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆರ್ಯ ಈಡಿಗ ಸಮಾಜದ ಅಧ್ಯಕ್ಷ ಸುಭಾಷ ಚಿದ್ರಿ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮಗಳು ಹಾಗೂ ತಾಲ್ಲೂಕು ಕೇಂದ್ರಗಳಿಂದ ಯುವಕರು, ಮಹಿಳೆಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸಸ್ವಿಗೊಳಿಸಬೇಕೆಂದು ಕರೆ ಕೊಟ್ಟರು.
ಒ.ಬಿ.ಸಿ ಆರ್ಮಿ ಒಕ್ಕೂಟದ ಅಧ್ಯಕ್ಷ ತಾನಾಜಿ ಸಗರ ಹಾಗೂ ಈಡಿಗ ಸಮಾಜದ ಸಂಗಯ್ಯ ಸುಲ್ತಾನಪುರ ಮಾತನಾಡಿದರು.
ಒಬಿಸಿ ಆರ್ಮಿ ಕಾರ್ಯಾಧ್ಯಕ್ಷ ರಾಜಕುಮಾರ ಟಿಳ್ಳೆಕರ್, ಶೋಷಿತ ಸಮುದಾಯಗಳ ಮುಖಂಡರಾದ ಸುನಿಲ ಖಾಶೆಂಪುರ, ಗೊಂಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ತುಕಾರಾಮ ಚಿಮಕೊಡೆ, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ, ಆರೋಗ್ಯ ಕವಚ ಸದಸ್ಯ ಶಿವಕುಮಾರ ನೀಲಿಕಟ್ಟಿ, ಬಿ.ವಿ.ಎಸ್ ಜಿಲ್ಲಾ ಅಧ್ಯಕ್ಷ ಪ್ರದಿಪ ನಾಟೇಕರ್, ಶ್ರೀಪತರಾವ ದೀನೆ, ಶ್ರೀಮಂತ ತೆಲಂಗ ಹಾಗೂ ಅನೇಕರು ಪತ್ರಿಕಾಗೋಷ್ಟಿಯಲ್ಲಿದ್ದರು.































