
ಭಾಲ್ಕಿ:ಗಡಿಜಿಲ್ಲೆ ಬೀದರ್‌ನ ಎಲ್ಲ ತಾಲೂಕುಗಳು ಸಂಪೂರ್ಣ ಬರಪೀಡಿತ ಪ್ರದೇಶ ಘೋಷಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರ ಜತೆಗೆ ಕಾರ್ಖಾನೆಗೆ ಕಬ್ಬು ಸಾಗಿಸುವ ರೈತರ ಪ್ರತಿ ಟನ್ ಕಬ್ಬಿಗೆ ೫ ಸಾವಿರ ರೂ ಘೋಷಣೆ ಮಾಡಬೇಕು ಎಂದು ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ನಗರದ ತಹಸೀಲ್ ಕಚೇರಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಗಡಿಜಿಲ್ಲೆ ಬೀದರ್ ಅನಾವೃಷ್ಟಿಯಿಂದ ಸಂಪೂರ್ಣ ಜಿಲ್ಲೆಯ ರೈತರು ಮುಂಗಾರು ಹಂಗಾಮಿನ ಬೆಳೆ ಹಾನಿಯಾಗಿದೆ ಮತ್ತು ಅನೇಕ ರೈತರು ಬಿತ್ತನೆ ಮಾಡಿಲ್ಲ ಬಿತ್ತಿದ ರೈತರ ಬೆಳೆಗಳು ಮಳೆ ಇಲ್ಲದೆ ಒಣಗುತ್ತಿವೆ. ಗೊಬ್ಬರ ಬೀಜ ಹಾಕಿ ಹೊಲ ಉಳಿಮೆ ಮಾಡಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ವಾಡಿಕೆಯಿಂದ ಸುಮಾರು ಶೇ. ೭೫ ರಷ್ಟು ಮಳೆ ಕೊರತೆಯಾಗಿದೆ.
ಆದರೆ ರಾಜ್ಯ ಸರಕಾರ ಜಿಲ್ಲೆಯಲ್ಲಿಯ ಕೆಲವು ತಾಲೂಕುಗಳು ಮಾತ್ರ ಬರ ಘೋಷಣೆ ಮಾಡಿ ಜಿಲ್ಲೆಯ ನಾಲ್ಕು, ತಾಲೂಕುಗಳನ್ನು ಬರ ಘೋಷಣೆಯಿಂದ ಕೈ ಬಿಟ್ಟಿರುವುದು ಜಿಲ್ಲೆಯ ರೈತರಿಗೆ ಮಾಡಿದ ಘೋರ ಅನ್ಯಾಯವಾಗಿದೆ ಕೂಡಲೇ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಘೋಷಿಸಿ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು.
ಬೆಳೆ ವಿಮೆ ಕಟ್ಟಿದ ರೈತರಿಗೆ ಸಂಪೂರ್ಣ ಬೆಳೆ ವಿಮೆ ಕೊಡಬೇಕು. ಪ್ರತಿ ಎಕರೆಗೆ ೫೦ ಸಾವಿರ ರೂ ಪರಿಹಾರ ಕೊಡಬೇಕು. ಜತೆಗೆ ಬಿಎಸ್‌ಎಸ್‌ಕೆ ಪ್ರಸ್ತುತ ಹಂಗಾಮಿನಲ್ಲಿ ಲೀಸ್‌ನಲ್ಲಿ ಪ್ರಾರಂಭಿಸಬೇಕು. ಸಾಲದ ಸುಳಿಗೆ ಸಿಲುಕಿರುವ ಸಕ್ಕರೆ ಕಾರ್ಖಾನೆಗಳು ಒಟಿಎಸ್ ಮೂಲಕ ಸದೃಢಗೊಳಿಸಬೇಕು.
ಐಪಿ ಸೆಟ್ ನೀರಾವರಿಗೆ ಹಗಲಿನಲ್ಲಿ ಎಂಟು ಗಂಟೆ ವಿದ್ಯುತ್ ಕೊಡಬೇಕು ಮತ್ತು ವಿದ್ಯುತ್ ಕಂಬ ಹಾಗೂ ವೈರ್ ಗಳನ್ನು ಸರಿಪಡಿಸಿ ವಿದ್ಯುತ್ ಸರಿಯಾಗಿ ವಿತರಣೆ ಮಾಡುವಂತೆ ಕಾರ್ಯಪಡೆ ರೂಪಿಸಬೇಕು ರೈತರ ಜಮಿನುಗಳಿಗೆ ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡಲು ಶೇ.೭೫ ರಷ್ಟು ರಿಯಾಯಿತಿ ಮುಳ್ಳು ಬೇಲಿ ಸೋಲಾರ್ ತಂತಿ ಬೇಲಿಗಳನ್ನು ನಿರ್ಮಿಸಲು ಅನುದಾನವನ್ನು ಒದಗಿಸಬೇಕು ರೈತರ ಜಮೀನುಗಳಿಗೆ ವ್ಯವಸಾಯ ಮಾಡಲು ನಮ್ಮ ಹೊಲಕ್ಕೆ ನಮ್ಮ ರಸ್ತೆ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಉದ್ಯೋಗ ಖಾತ್ರಿ ಯೋಜನೆಯನ್ನು ವಿಜಿ ರಾಮಜಿ ಯೋಜನೆಯನ್ನು ರೈತರ ಹೊಲದಲ್ಲಿ ಬೆಳೆ ಕಳೆ ಕಳೆ ತೆಗೆಯಲು ಕಟಾವಿನ ಕಾರ್ಯ ಕೈಗೊಳ್ಳಲು ಎಕರಿಗೆ ಒಟ್ಟು ೫೦ ಮಾನವ ದಿನ ಕೂಲಿ ನಿಗದಿ ಮಾಡಬೇಕು.
೬೦ ವರ್ಷದ ಮೇಲ್ಪಟ್ಟ ರೈತರಿಗೆ ತಿಂಗಳಿಗೆ ೧೦ ಸಾವಿರ ರೂ ಮಾಶಾಸನ ಜಾರಿಗೊಳಿಸಬೇಕು. ಈ ಎಲ್ಲ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಯರೂಪಕ್ಕೆ ತರಬೇಕು ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಎಲ್ಲ ಶಾಸಕರ ವಿರುದ್ಧ ಆಂದೋಲನ ಮಾಡಬೇಕಾಗುತ್ತದೆ ಭಾಲ್ಕಿ ಮತ್ತು ಕಮಲನಗರ ಔರಾದ ಹುಲಸೂರ ತಾಲೂಕುಗಳನ್ನು ತಕ್ಷಣಕ್ಕೆ ಬರಗಾಲ ಘೋಷಣೆ ಮಾಡದಿದ್ದರೆ ಸೆ.೧ ರಿಂದ ನಗರದ ಗಾಂಧಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದರ್, ಜಿಲ್ಲಾ ಕಾರ್ಯಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ, ಕಾಶಿನಾಥ ಭೂರೆ, ಪ್ರಮುಖರಾದ ಶಿವಾನಂದ ಸೋಮಯ್ಯ ಸ್ವಾಮಿ, ವಿಠಲರಾವ ಮೇತ್ರೆ, ಬಾಬುರಾವ, ನಾಗಶೆಟ್ಟಿ ಖಂದಾರೆ, ಮಲ್ಲಿಕಾರ್ಜುನ, ಸಂತೋಷ, ಬಸಯ್ಯ ಸ್ವಾಮಿ ಡೋಣಗಾಪುರ, ಓಂಕಾರ ಮೋರೆ, ಶಿವರಾಜ ಜಲ್ದೆ ಸೇರಿದಂತೆ ಹಲವರು ಇದ್ದರು.






























