ಬಾಂಬ್ ಸ್ಫೋಟ: ೩೨ ಪಾಕ್ ಸೈನಿಕರ ಸಾವು

ಇಸ್ಲಾಮಾಬಾದ್,ಮೇ.೨೫-ಪಾಕಿಸ್ತಾನದ ಬಲೂಚಿಸ್ತಾನದ ಕರಾಚಿ-ಕ್ವೆಟ್ಟಾ ಹೆದ್ದಾರಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ೩೨ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಈ ದಾಳಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದಿದೆ ಅದರಲ್ಲಿ ಒಂದು ಬಸ್ ಕೂಡ ಸೇರಿದೆ ಎನ್ನಲಾಗಿದೆ.


ಪಾಕಿಸ್ತಾನದಲ್ಲಿ ಮತ್ತೊಮ್ಮೆ ಸೇನೆಯ ಮೇಲೆ ಬೃಹತ್ ದಾಳಿ ನಡೆದಿದೆ. ಬಲೂಚಿಸ್ತಾನದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ದಾಳಿಯಲ್ಲಿ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.


ಕರಾಚಿ-ಕ್ವೆಟ್ಟಾ ಹೆದ್ದಾರಿಯ ಖುಜ್ದಾರ್‌ನ ಝೋರೊ ಪಾಯಿಂಟ್ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ೩೨ ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ. ಎಂಟು ವಾಹನಗಳ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದ್ದು, ನಿಲ್ಲಿಸಿದ್ದ ಕಾರಿನಲ್ಲಿ ಇರಿಸಲಾಗಿದ್ದ ಸ್ಫೋಟಕ (ವಾಹನದಿಂದ ಸಾಗಿಸಬಹುದಾದ ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡಿದೆ. ಬಸ್ ಸೇರಿದಂತೆ ಮೂರು ವಾಹನಗಳು ನೇರವಾಗಿ ಅದರ ಪ್ರಭಾವಕ್ಕೆ ಒಳಗಾಗಿವೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನಿ ಸೇನಾ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು ಅದರಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.


ಮಾಹಿತಿಯ ಪ್ರಕಾರ, ಈ ಸೇನಾ ಬೆಂಗಾವಲು ತಂಡವು ಎಂಟು ವಾಹನಗಳೊಂದಿಗೆ ಪ್ರಯಾಣಿಸುತ್ತಿದ್ದಾಗ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಸ್ಫೋಟ ಸಂಭವಿಸಿದೆ. ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಬೆಂಗಾವಲು ಪಡೆಯ ಮೂರು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.ಅದರಲ್ಲಿ ಒಂದು ಸೇನಾ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ಕರೆದೊಯ್ಯುತ್ತಿದ್ದ ಬಸ್ ಆಗಿತ್ತು.


ಸ್ಥಳೀಯ ಮಾಧ್ಯಮ ವರದಿಗಳು ಮತ್ತು ಮಿಲಿಟರಿ ಮೂಲಗಳ ಪ್ರಕಾರ, ಇದು ಯೋಜಿಸಲಾದ ಆತ್ಮಹತ್ಯಾ ದಾಳಿಯಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಫೋಟಕಗಳನ್ನು ಬಳಸಲಾಗಿದೆ. ಗಾಯಾಳುಗಳನ್ನು ತಕ್ಷಣ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.