ಸುರಿಗೇನಹಳ್ಳಿಯಲ್ಲಿ ಬಿಎಂಸಿ ಹಾಲಿನ ಘಟಕ ಉದ್ಘಾಟನೆ

ಚೇಳೂರು, ಡಿ. ೧೬- ದಲಿತರು ಸೇರಿದಂತೆ ಎಲ್ಲ ಜನಾಂಗದವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದರೆ ಸುಖಾ ಸುಮ್ಮನೆ ನನ್ನ ಮೇಲೆ ಸುಳ್ಳು ಅಪವಾದ ಹೊರಿಸುತ್ತಿರುವ ಮಾಜಿ ನಿರ್ದೇಶಕರೆ ಎಚ್ಚರ. ನೀವು ಮಾಡಿರುವ ಕೆಲಸಗಳು ಎಲ್ಲ ನನಗೆ ತಿಳಿದಿದೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಹೇಳಿದರು.


ಗುಬ್ಬಿ ತಾಲ್ಲೂಕಿನ ಸುರಿಗೇನಹಳ್ಳಿಯಲ್ಲಿ ಬಿಎಂಸಿ ನೂತನ ಹಾಲಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.


ಗುಬ್ಬಿ ತಾಲ್ಲೂಕಿನ ಎಲ್ಲ ಕಡೆ ಬಿಎಂಸಿ ಮಾಡಬೇಕು ಅಂತ ಹೊರಟಿರುವುದು ನಾನೊಬ್ಬಳೆ. ಇಡೀ ಜಿಲ್ಲೆಯಲ್ಲಿ ಹಸುಗಳ ಸಾವಿನ ಸಂಖ್ಯೆ ಕಡಿಮೆ ಇರೋದೇ ಗುಬ್ಬಿ ತಾಲ್ಲೂಕಿನಲ್ಲಿ, ಅದಕ್ಕೆ ನಮ್ಮ ತುಮುಲ್ ವೈದ್ಯರು ಹಾಗೂ ಅಧಿಕಾರಿಗಳು ಅವರ ಶ್ರಮ ಬಹಳ ಮುಖ್ಯವಾಗಿದೆ ಎಂದರು.


ಈಗ ನಾನು ನಿರ್ದೇಶಕಿಯಾಗಿ ಬಂದ ಮೇಲೆ ತಾಲ್ಲೂಕಿನಲ್ಲಿ ೮೩ ಸಾವಿರ ಲೀಟರ್ ಹಾಲು ಮಾತ್ರ ತುಮುಲ್ ಡೈರಿಗೆ ಬರುತಿತ್ತು. ಒಂದು ತಿಂಗಳ ಹಿಂದೆ ೧ ಲಕ್ಷದ ೨೮ ಸಾವಿರಕ್ಕೆ ಏರಿದೆ. ನಮ್ಮ ತಾಲ್ಲೂಕಿನಲ್ಲಿ ಖಾಸಗಿ ಡೈರಿಗಳಿವೆ. ನಾನು ಹಳ್ಳಿಗಳಿಗೆ ಹೋದಾಗ ಜನರು ನನ್ನನ್ನು ಕೇಳುತ್ತಾರೆ. ಖಾಸಗಿ ಡೈರಿಗಳು ಜಾಸ್ತಿ ಇರುವುದು ನಿಮ್ಮ ತಪ್ಪಲ್ಲ. ಈ ಹಿಂದೆ ಇದ್ದ ನಿರ್ದೇಶಕರ ಪಾಪದ ಫಲ ಎಂದು ಸಾರ್ವಜನಿಕರು ದೂರಿದ್ದಾರೆ.


ನಾನು ತಾಲ್ಲೂಕಿನಲ್ಲಿ ಎಲ್ಲ ಜನಾಂಗದವರನ್ನು ಮೇಲೆ ಎತ್ತುವ ಕೆಲಸ ಮಾಡುತಿದ್ದೇನೆ. ಕೆಲವರು ನನ್ನ ಮೇಲೆ ಇಲ್ಲ ಸಲ್ಲದ ಅಪವಾದ ಹೊರಿಸುತ್ತಿದ್ದಾರೆ. ಅದರ ಪರಿಣಾಮ ಮುಂದೆ ಗೊತ್ತಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ತುಳಸಿದಾಸ್, ಜಿ. ರಂಗನಾಥ್, ಮುನಿಯಪ್ಪ, ತುಮುಲ್ ಅಧಿಕಾರಿಗಳಾದ ಶಂಕರ್ನಾಗ್, ಮೋಹನ್, ರಾಜು, ಪವನ್ ಸೇರಿದಂತೆ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.