ರಕ್ತದಾನದಿಂದ ತೂಕ ನಿರ್ವಹಣೆಗೆ ಸಹಕಾರಿ

ಕೋಲಾರ,ಸೆ.೨- ರಕ್ತದಾನವು ದೇಹದಲ್ಲಿ ಕಬ್ಬಿಣದ ಮಟ್ಟವನ್ನು ಸಮತೋಲನಗೊಳಿಸುವುದು ಹೊಸ ರಕ್ತ ಕಣಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿ ತೂಕ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಯುವಕರು ಹೆಚ್ಚು ರಕ್ತದಾನ ಮಾಡುವುದರ ಮೂಲಕ ಒಂದು ಜೀವವನ್ನು ಉಳಿಸಬಹುದು ಎಂದು ಚೌಡೇಶ್ವರಿ ಆಸ್ಪತ್ರೆಯ ಡಾ. ಬೀರೇಗೌಡ ತಿಳಿಸಿದರು.


ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ನರಸಿಂಹರಾಜು ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡುತ್ತಾ, ಮನುಷ್ಯ ಪಂಚಭೂತಗಳಾದ ಭೂಮಿ, ಆಕಾಶ, ಗಾಳಿ, ನೀರು, ಬೆಂಕಿ, ಇವು ಇಲ್ಲದೆ ಬದುಕಲು ಸಾಧ್ಯವಿಲ್ಲ ಹಾಗೆಯೇ ಮನುಷ್ಯನಲ್ಲಿ ಮಾತ್ರ ರಕ್ತ ಉತ್ಪತ್ತಿಯಾಗುತ್ತದೆ. ಈ ಉತ್ಪತ್ತಿಯಾದ ರಕ್ತವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು ಎಂದರು.


ರಕ್ತ ಹೀನತೆಯಿಂದ ಬಳಲುತ್ತಿರುವ ಮನುಷ್ಯನಿಗೆ ಅತ್ಯವಶ್ಯಕವಾಗಿ ರಕ್ತ ಬೇಕಾಗುತ್ತದೆ ಇಂತಹ ಸಂದರ್ಭಗಳಲ್ಲಿ ಆರೋಗ್ಯವಂತ ೧೮ ರಿಂದ ೬೫ ವರ್ಷದ ಒಳಗಿನ ಎಲ್ಲರೂ ರಕ್ತ ಕೊಡುವುದರ ಮೂಲಕ ಹಲವು ಜೀವಿಗಳನ್ನು ಉಳಿಸಬಹುದಾಗಿದೆ ಆದ್ದರಿಂದ ರಕ್ತ ದಾನ ಮಾಡುವ ಹಾಗೂ ಕೊಡುವ ವ್ಯವಸ್ಥೆ ಅರಿವು ಇನ್ನು ಆಗಬೇಕಾಗಿದೆ ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಾ ಸಂಘಗಳು ಕ್ರೀಡಾಪಟುಗಳು ಯುವಕ ಯುತಿಯರು ಇಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಂದು ಜೀವವನ್ನು ಉಳಿಸಬಹುದಾಗಿದೆ ಎಂದರು.


ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೋಪಾಲಕೃಷ್ಣಗೌಡ ಮಾತನಾಡುತ್ತಾ, ಯುವಕರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಅವರು ಆರೋಗ್ಯ ಚೈತನ್ಯದಿಂದ ಲವಲವಿಕೆಯಿಂದ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸದಾ ಸೇವೆಗಾಗಿ ಇದ್ದು ಇಂತಹ ಕಾರ್ಯಗಳಲ್ಲದೆ ಅನೇಕ ಸಂದರ್ಭದಲ್ಲಿ ರಕ್ತವನ್ನು ಅನೇಕರಿಗೆ ನೀಡುತ್ತಾ ಬಂದಿದೆ ಹಾಗೂ ಯಾವುದೇ ಸಂದರ್ಭಗಳಲ್ಲೂ ಸದಾ ನಮ್ಮ ತಂಡ ಸಿದ್ಧವಾಗಿದೆ ಎಂದರು.


ಈ ಸಂದರ್ಭದಲ್ಲಿ ಈ ಸಂಸ್ಥೆಯ ಸಂಚಾಲಕಿ ಶಾಂತಕ್ಕ, ಬಿ.ಕೆ ನಾರಾಯಣಸ್ವಾಮಿ, ಚಂದ್ರಶೇಖರ್ ರಾಜು, ಡಾ. ರೇವತಿ, ರೆಡ್ ಕ್ರಾಸ್ ಸಂಸ್ಥೆಯ ವೈಸ್ ಚೇರ್ಮೆನ್ ಆರ್. ಶ್ರೀನಿವಾಸನ್, ಕಾರ್ಯದರ್ಶಿ ನಂದೀಶ್ ಕುಮಾರ್, ರಕ್ತ ನಿಧಿ ಸಂಸ್ಥೆಯ ವೆಂಕಟೇಶ್, ವಿ.ಪಿ ಸೋಮಶೇಖರ್, ನಾಗೇಂದ್ರ ಪ್ರಸಾದ್, ನಾಗರಾಜು, ಲಾವಣ್ಯ, ಆರ್. ವೆಂಕಟೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.