
ಬೀದರ್:ಮಾ.11: ಪ್ರಜಾಪಿತಾ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಜೆಪಿ ನಗರ ಪಾವನಧಾಮ ಕೇಂದ್ರದ ವತಿಯಿಂದ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿಯಾಗಿದ್ದ ರಾಜಯೋಗಿನಿ ದಾದಿ ಹೃದಯಮೋಹಿನಿ ಅವರ ಐದನೇ ಪುಣ್ಯಸ್ಮರಣೆ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಬೀದರ ಜಿಲ್ಲಾಧ್ಯಕ್ಷರಾದ ಡಾ. ವಿದ್ಯಾ ಪಾಟೀಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿದ್ಯಾ ಪಾಟೀಲ್ ಅವರು, ರಕ್ತದಾನವು ಮಾನವ ಜೀವ ಉಳಿಸುವ ಅತ್ಯಂತ ಮಹತ್ವದ ಸೇವೆಯಾಗಿದೆ ಎಂದು ಹೇಳಿದರು. ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ರೋಗಗಳ ಸಂದರ್ಭದಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನ ಮಾಡಿದವರ ಸಹಕಾರ ಅನೇಕ ಜನರ ಜೀವ ಉಳಿಸಲು ಕಾರಣವಾಗುತ್ತದೆ ಎಂದು ತಿಳಿಸಿದರು.
ಒಬ್ಬ ವ್ಯಕ್ತಿ ಮಾಡಿದ ರಕ್ತದಾನದಿಂದ ಮೂವರಿಗೆ ಜೀವದ ಆಶಾಕಿರಣ ದೊರೆಯಬಹುದು. ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಬಹುದು. ರಕ್ತದಾನದಿಂದ ಯಾವುದೇ ರೀತಿಯ ದೈಹಿಕ ಹಾನಿ ಆಗುವುದಿಲ್ಲ; ಬದಲಾಗಿ ಇದು ದೇಹದ ಆರೋಗ್ಯಕ್ಕೂ ಸಹಕಾರಿ ಆಗುತ್ತದೆ. ಆದ್ದರಿಂದ ಯುವಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸಿ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಪಾವನಧಾಮ ರಾಜಯೋಗ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೇನಜಿ ಮಾತನಾಡಿ, ದಾದಿ ಹೃದಯಮೋಹಿನಿ ಅವರು ತಮ್ಮ ಸಂಪೂರ್ಣ ಜೀವನವನ್ನು ಜನಸೇವೆಗೆ ಮುಡುಪಾಗಿಟ್ಟ ಮಹಾನ್ ಆತ್ಮೆಯಾಗಿದ್ದರು ಎಂದು ಹೇಳಿದರು. ಸರಳತೆ, ಪಾವಿತ್ರತೆ ಹಾಗೂ ಸತ್ಯತೆಯ ಆಧಾರದಿಂದ ಪರಮಾತ್ಮನ ಶಕ್ತಿಯನ್ನು ಸ್ವತಃ ಅನುಭವಿಸಿ ಅನೇಕ ಜನರಿಗೆ ಆ ದಿವ್ಯ ಶಕ್ತಿಯ ಅನುಭವವನ್ನು ಮಾಡಿಸಿದ ಮಹಾನ್ ದಿವ್ಯ ಚೇತನರಾಗಿದ್ದರು ಎಂದು ಸ್ಮರಿಸಿದರು.
ಇಂದು ದಾದಿ ಅವರು ದೇಹತಃ ನಮ್ಮೊಂದಿಗಿಲ್ಲದಿದ್ದರೂ ಸಹ, ಅವರ ಆದರ್ಶಗಳು, ಉಪದೇಶಗಳು ಹಾಗೂ ಅವರು ತೋರಿಸಿದ ಮಾರ್ಗವು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿವೆ. ಸಮಾಜಸೇವೆಗೆ ತಮ್ಮ ಜೀವನವನ್ನೇ ಅರ್ಪಿಸಿದ ದಾದಿ ಅವರ ಸ್ಮರಣಾರ್ಥವಾಗಿ ಜೀವದ ಆಧಾರವಾದ ರಕ್ತವನ್ನು ದಾನ ಮಾಡುವ ಮೂಲಕ ಅನೇಕ ಜನರ ಜೀವ ಉಳಿಸಲು ಸಹಕಾರ ನೀಡುವ ಉದ್ದೇಶದಿಂದ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬೀದರ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಸಮಾಜಸೇವೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದರು. ಪ್ರತಿ ವರ್ಷ ಮಾರ್ಚ್ 11ರಂದು ಈ ದಿನವನ್ನು ಬ್ರಹ್ಮಕುಮಾರೀಸ್ ಸಂಸ್ಥೆಯು ವಿಶ್ವದಾದ್ಯಂತ “ದಿವ್ಯತಾ ದಿನ”ವೆಂದು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ದಿವ್ಯ ಚೇತನರಾದ ದಾದಿ ಹೃದಯಮೋಹಿನಿ ಅವರಿಗೆ ಶ್ರದ್ಧಾ ಸುಮನೆಗಳನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಬೀದರ ಪಾವನಧಾಮ ರಾಜಯೋಗ ಕೇಂದ್ರದ ಸಂಚಾಲಕಿ ಬಿ.ಕೆ. ಪ್ರತಿಮಾ ಬಹೇನಜಿ, ಬಿ.ಕೆ. ಗುರುದೇವಿ ಬಹೇನಜಿ, ರೆಡ್ ಕ್ರಾಸ್ ಹಾಗೂ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ ಖುರತ್ ಉಲ್ ಐನ್ ಉಪಸ್ಥಿತರಿದ್ದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ಹಾಗೂ ಹಣ್ಣುಗಳನ್ನು ನೀಡಿ ಗೌರವಿಸಲಾಯಿತು.




















