ಏಕರೂಪ ದರ ನಿಗದಿಗೆ ತಡೆ

ಬೆಂಗಳೂರು,ಸೆ.೨೩- ರಾಜ್ಯದ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಏಕರೂಪದ ಟಿಕೆಟ್ ಬೆಲೆ ೨೦೦ ರೂಪಾಯಿ ನಿಗದಿ ಮಾಡಿದ್ದ ರಾಜ್ಯಸರ್ಕಾರದ ಆದೇಶಕ್ಕೆ ಹೈಕೋರ್ಟ್ ಇಂದು ತಡೆ ನೀಡಿದೆ. ಈ ಮೂಲಕ ರಾಜ್ಯ ಸರ್ಕಾರದ ಆದೇಶಕ್ಕೆ ಹಿನ್ನಡೆಯಾಗಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ಮೇರೆಗೆ ನ್ಯಾಯಮೂರ್ತಿ ರವಿ ವಿ ಹೊಸ್ಮಾನಿ ಅವರು ಮಧ್ಯಂತರ ಪರಿಹಾರವಾಗಿ ತಡೆ ನೀಡಿ ಆದೇಶ ಹೊರಡಿಸಿದ್ದಾರೆ.

ಈ ಕುರಿತಾದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಮಧ್ಯಂತರ ಆದೇಶವನ್ನು ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಪ್ರಕಟಿಸಿದ್ದು
ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರಲಿದೆ ಎಂದು ಪೀಠ ಇದೇ ವೇಳೆ, ಸ್ಪಷ್ಟ ಪಡಿಸಿದೆ.

ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಏಕರೂಪದ ಬೆಲೆ ಜಾರಿ ಮಾಡಬೇಕು ಎನ್ನುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿನ್ನೆಡೆಯಾಗಿದ್ದು ಮುಂದೆ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ

ಕರ್ನಾಟಕ ಸಿನಿಮಾಸ್ ನಿಯಂತ್ರಣ ತಿದ್ದುಪಡಿ ನಿಯಮಗಳು ೨೦೨೫ ರ ಅಡಿಯಲ್ಲಿ ಚಲನಚಿತ್ರ ಟಿಕೆಟ್ ಬೆಲೆಯನ್ನು ೨೦೦ ರೂ.ಗೆ ಮಿತಿಗೊಳಿಸುವ ರಾಜ್ಯ ಸರ್ಕಾರದ ಹೊಸ ನಿಯಮವನ್ನು ಕರ್ನಾಟಕ ಹೈಕೋರ್ಟ್ ತಡೆಹಿಡಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿ ಮಾಡಿದ್ದ ಆದೇಶಕ್ಕೆ ಹೈಕೋಟ್ ತಡೆ ನೀಡಿದ್ದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಸಂಘಕ್ಕೆ ಗೆಲುವು ಸಿಕ್ಕಂತಾಗಿದ್ದ ರಾಜ್ಯ ಸರ್ಕಾರಕ್ಕೆ ಹಿನ್ನೆಡೆ ಆಗಿದೆ.

ಟಿಕೆಟ್ ದರ ನಿಗದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ’ಕರ್ನಾಟಕ ಸಿನಿಮಾ, ನಿಯಂತ್ರಣ ಮತ್ತು ತಿದ್ದುಪಡಿ ನಿಯಮಗಳು-೨೦೨೫’ ಅನ್ನು ಪ್ರಶ್ನಿಸಿ, ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಡ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಶಂತನು ಪೈ, ಕೀಸ್ಟೋನ್ ಎಂಟರ್‌ಟೈನ್‌ಮೆಂಟ್ ಹಾಗೂ ವಿ.ಕೆ.ಫಿಲ್ಡ್ ಈ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದವು.

’ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಿಗೆ ೨೦೦ ನಿಗದಿಪಡಿಸಿರುವ ಸರ್ಕಾರದ ನಿರ್ಧಾರ ಏಕಪಕ್ಷೀಯ, ಕಾನೂನು ಬಾಹಿರ ಮತ್ತು ವಿವೇಚನಾರಹಿತವಾಗಿದೆ. ಸಂವಿಧಾನದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸರ್ಕಾರ ೨೦೧೭ರಲ್ಲಿಯೂ ಇದೇ ರೀತಿಯ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದ ನಂತರ ಆ ಆದೇಶವನ್ನು ವಾಪಸ್ ಪಡೆಯಲಾಗಿತ್ತು’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ಈ ಹಠಾತ್ ಕ್ರಮವನ್ನು ಚಲನಚಿತ್ರ ನಿರ್ಮಾಪಕರನ್ನು ಆಶ್ಚರ್ಯಗೊಳಿಸಿದೆ, ಅವರು ಸಾಮಾನ್ಯವಾಗಿ ಪ್ರಮುಖ ಚಲನಚಿತ್ರಗಳ ಬಿಡುಗಡೆಗೆ ಮೊದಲು ಹೆಚ್ಚಿನ ಟಿಕೆಟ್ ಬೆಲೆಗಳಿಗೆ ಒತ್ತಾಯಿಸುತ್ತಿದ್ದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರವಾಗಿ ಹಾಜರಾದ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ್, ಸರ್ಕಾರದ ತೀರ್ಮಾನವನ್ನು ಬೆಂಬಲಿಸಿ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿದೆ. ಅದನ್ನು ಪರಿಗಣಿಸಿ ಮಂಡಳಿಯ ವಾದವನ್ನೂ ಸಹ ಆಲಿಸಬೇಕು, ಮಂಡಳಿಯ ಮನವಿ ಮೇರೆಗೆ ದರ ನಿಗದಿ ನಿರ್ಧಾರ ಕೈಗೊಂಡಿದೆ.

ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅಕ್ಕ ಪಕ್ಕದ ರಾಜ್ಯಗಳಲ್ಲಿ ಮಲ್ಟಿಪ್ಲೆಕ್ಸ್ ದರ ಏಕರೂಪದಲ್ಲಿದ್ದು ಅದೇ ರೀತಿ ರಾಜ್ಯದಲ್ಲಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು.

  • ರಾಜ್ಯದ ಮಲ್ಟಿಪ್ಲೆಕ್ಸ್ ಗಳಲ್ಲಿ ೨೦೦ ರೂಪಾಯಿ ದರ ನಿಗದಿ
  • ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ನಿಂದ ತಡೆ
  • ಮಲ್ಟಿ ಫ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರ ಸಂಘಕ್ಕೆ ಆರಂಭಿಕ ಜಯ
  • ನೆರೆಹೊರೆಯ ರಾಜ್ಯಗಳಲ್ಲಿ ಏಕರೂಪ ಟಿಕೆಟ್ ದರ ನಿಗದಿ ಹಿನ್ನೆಲೆ
  • ರಾಜ್ಯದಲ್ಲೂ ಏಕರೂಪ ಟಿಕೆಟ್ ದರ ನಿಗದಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ
  • ಮುಂದಿನ ಆದೇಶದವರೆಗೆ ತಡೆ ಮುಂದುವರಿಕೆ ಹೈಕೋರ್ಟ್ ಸ್ಪಷ್ಟನೆ

ರಾಜ್ಯ ಸರ್ಕಾರದ ಆದೇಶಕ್ಕೆ ತಡೆ


ಸೆಪ್ಟೆಂಬರ್ ೧೨ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ಹೊರಡಿಸಿದ್ದ ಕರ್ನಾಟಕ ಸಿನಿಮಾ ನಿಯಂತ್ರಣ ತಿದ್ದುಪಡಿ ನಿಯಮಗಳು-೨೦೨೫ ರಾಜ್ಯ ಹೈಕೋರ್ಟ್ ತಡೆ ನೀಡಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ ಷೇರುದಾರ ಸಂತನು ಪೈ, ಕೀಸ್ಟೋನ್ ಎಂಟರ್‌ಟೈನ್ಮೆಂಟ್, ವಿ ಕೆ ಫಿಲ್ಮ್ಸ್ ಮತ್ತು ಸಿನಿಪ್ಲೆಕ್ಸ್ ಪ್ರೈವೆಟ್ ಲಿಮಿಟೆಡ್ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು