
ಬೆಂಗಳೂರು, ಜೂ. ೨೯- ಮೀಸಲಾತಿಗೆ ಬಿಜೆಪಿ ಬಗೆದಿರುವ ದ್ರೋಹ ಹಾಗೂ ಹಿಂದುಳಿದವರಿಗೆ ಮಾಡಿರುವ ಅನ್ಯಾಯ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ. ಹೀಗಿದ್ದರೂ ಕೇಂದ್ರ ಸಚಿವ ಭೂಪೇಂದ್ರ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ತಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಮಾತನಾಡಿರುವುದು ಹಾಸ್ಯಾಸ್ಪದ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿಯ ಹಿರಿಯ ನಾಯಕ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹರಿಪ್ರಸಾದ್, ಪರಿಶಿಷ್ಟ ಜಾತಿ ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್ ಅಚಲವಾದ ಬದ್ಧತೆ ಹೊಂದಿದೆ.ಆದರೆ,ಮೀಸಲಾತಿ ವಿರೋಧಿಯಾದ ಬಿಜೆಪಿ ಇತಿಹಾಸ ತಿರುಚಲು ಹೊರಟಿದೆ ಎಂದು ಅವರು ದೂರಿದರು.
ಮಂಡಲ ಆಯೋಗದ ಶಿಫಾರಸ್ಸನ್ನು ವಿರೋಧಿಸಿ ಬಿಜೆಪಿ ಹೋರಾಟ ನಡೆಸಿದ್ದನ್ನು ಮರೆಮಾಚಲಾಗುತ್ತಿದೆ. ಬಿಜೆಪಿಯ ಮೀಸಲಾತಿ ವಿರೋಧಿ ಇತಿಹಾಸವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮೀಸಲಾತಿ ವಿರೋಧಿ ಚಳವಳಿಯಲ್ಲಿ ಬಿಜೆಪಿಯದ್ದು ಸಿಂಹಪಾಲು ಎಂದು ಅವರು ಹೇಳಿದ್ದಾರೆ.
ಬಿಜೆಪಿಯು ಮೀಸಲಾತಿ ಪರ ಮಾತನಾಡುವ ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರ ಸಚಿವ ಭೂಪೇಂದ್ರ ಯಾಧವ್ ಇತಿಹಾಸಕ್ಕೆ ಅಪಚಾರ ನಡೆಸಿ ಜನರನ್ನು ಮೂರ್ಖರನ್ನಾಗಿಸಿದರೆ ಅದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ಉಪರಾಷ್ಟ್ರಪತಿ ಸುಳ್ಳು ಹೇಳಿದ್ದಾರೆ
ದೇಶದಲ್ಲಿ ಅತ್ಯಂತ ಕಾನೂನುಬದ್ಧವಾಗಿ ನಡೆದಿರುವ ಸಂವಿಧಾನ ತಿದ್ದುಪಡಿ ಪ್ರಕ್ರಿಯೆ ಕುರಿತು ಸಾಂವಿಧಾನಿಕ ಹುದ್ದೆಯಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸುಳ್ಳು ಹೇಳಿರುವುದು ಆಘಾತಕಾರಿ ಸಂಗತಿ ಎಂದು ಅವರು ಹೇಳಿದ್ದಾರೆ.
ಸಂವಿಧಾನದ ೩೬೮ನೇ ವಿಧಿಯು ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗುವಂತೆ ಯಾವುದೇ ತಿದ್ದುಪರಿ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಅವರು ತಿಳಿಸಿದ್ದಾರೆ.