
ಬೆಂಗಳೂರು, ನ. ೮- ಬೆಂಗಳೂರು ನಗರದಲ್ಲಿ ಗಡುವು ಮುಗಿದಿದ್ದರೂ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ನಾಳೆಯಿಂದ ಬಿಜೆಪಿ ಮತ್ತೆ ಎಲ್ಲ ಕ್ಷೇತ್ರಗಳಲ್ಲೂ ರಸ್ತೆಗುಂಡಿ ಮುಚ್ಚುವಂತೆ ಆಗ್ರಹಿಸಿ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನ ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿ ಬಿದ್ದ ರಸ್ತೆಗಳು ಮತ್ತು ಕಸ ವಿಲೇವಾರಿ ಆಗದಿರುವುದರಿಂದ ಖಂಡಿಸಿ, ಕ್ಷೇತ್ರದಲ್ಲಿ ನಡೆದ ಜನಜಾಗೃತಿ ಅಭಿಯಾನದಲ್ಲಿ ಭಾಗಿಯಾಗಿ ಮಾತನಾಡಿದ ಅವರು ರಸ್ತೆ ಗುಂಡಿಗಳನ್ನು ಮುಚ್ಚಲು ೧೮೦೦ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ ಗುಂಡಿಗಳನ್ನು ಮುಚ್ಚಿಲ್ಲ. ಗುಂಡಿಗಳು ರಸ್ತೆಗಳಲ್ಲಿ ಹಾಗೆಯೇ ಇವೆ. ಮುಚ್ಚಿಲ್ಲ ಎಂದು ಆರೋಪಿಸಿದರು.
ಜವಾಬ್ದಾರಿ ಇಲ್ಲದೇ ಎಲ್ಲರೂ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಸತ್ತು ಹೋಗಿದೆ. ೨ ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದರು.
ಗ್ರೇಟರ್ ಬೆಂಗಳೂರು ಆದ ಮೇಲೆ ಹಣ ಬಿಡುಗಡೆಯಾಗಿಲ್ಲ ಎಂದು ಗುತ್ತಿಗೆದಾರರು ಹೇಳಿದ್ದಾರೆ. ಕಸದ ತೆರಿಗೆಯನ್ನು ಜಾಸ್ತಿ ಮಾಡಿದ್ದಾರೆ. ಸರ್ಕಾರದಲ್ಲಿ ಹಣ ಇಲ್ಲ, ಈ ಸರ್ಕಾರ ಪಾಪರ್ ಆಗಿದೆ ಎಂದರು.
ರಸ್ತೆ ಗುಂಡಿಯಿಂದ ಮೃತಪಟ್ಟವರ ಶಾಪ ಈ ಸರ್ಕಾರಕ್ಕೆ ತಟ್ಟದೇ ಬಿಡಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಗುಂಡಿ ಮುಚ್ಚಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಉಗ್ರರಿಗೆ ಸ್ವರ್ಗ ಆಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲೇ ಖೈದಿಗಳು ಯಾವುದೇ ಭಯ ಭೀತಿ ಇಲ್ಲದೆ ಮೊಬೈಲ್ ಬಳಸುತ್ತಿದ್ದಾರೆ ಎಂದು ದೂರಿದರು.
ಅಶ್ವತ್ಥ್‌ನಾರಾಯಣ ಟೀಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಅಶ್ವತ್ಥ್‌ನಾರಾಯಣ ಅವರು, ರಸ್ತೆಗುಂಡಿ ಮುಚ್ಚಲು ರಾಜ್ಯ ವಿಫಲವಾಗಿದೆ. ಬೆಂಗಳೂರಿನಲ್ಲಿ ಕಸ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ. ರಸ್ತೆ ಗುಂಡಿಯಲ್ಲಿ ಬಿದ್ದು ಜನ ಸಾಯುತ್ತಿದ್ದಾರೆ. ಕೈಕಾಲುಗಳನ್ನು ಮುರಿದುಕೊಳ್ಳುತ್ತಿದ್ದಾರೆ. ಇಷ್ಟಾದರೂ ರಾಜ್ಯ ಸರ್ಕಾರ ರಸ್ತೆಗುಂಡಿಗಳನ್ನು ಮುಚ್ಚುವತ್ತ ಗಮನ ಕೊಟ್ಟಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೈಲಿನ ಒಳಗೂ ಕಾನೂನು ಸುವ್ಯವಸ್ಥೆ ಇಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜೈಲಿನಲ್ಲಿ ಕಾಂಗ್ರೆಸ್ ಸರ್ಕಾರ ಅವರ ಬ್ರದರ್ಸ್‌ಗಳನ್ನು, ಹಿತೈಷಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.
ಕಬ್ಬು ಬೆಳೆಗಾರರಿಗೆ ಅವರು ಬಯಸಿದ ರೀತಿಯಲ್ಲಿ ಸರ್ಕಾರ ದರ ನಿಗದಿ ಮಾಡಿಲ್ಲ. ಕಬ್ಬು ಬೆಳೆಗಾರರ ಪ್ರತಿಭಟನೆಗೆ ತೇಪೆ ಹಾಕಿದೆ ಅಷ್ಟೇ ಎಂದು ಅಶ್ವತ್ಥ್‌ನಾರಾಯಣ ಟೀಕಿಸಿದರು.


























