
ಹುಬ್ಬಳ್ಳಿ ಪ್ರಕರಣ
ಬೆಂಗಳೂರು, ಜ. ೭- ಹುಬ್ಬಳ್ಳಿಯ ಕೇಶವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿರುವ ಘಟನೆ ಬಗ್ಗೆ ಬಿಜೆಪಿ ನಾಯಕರುಗಳು ಕಿಡಿಕಾರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಪಕ್ಷದ ನಗರಪಾಲಿಕೆ ಸದಸ್ಯೆ ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿಯ ಕೇಶವಾಪುರ ಪೊಲೀಸರು ಬಿಜೆಪಿಯ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿರುವ ಅಮಾನುಷ ಘಟನೆ ನಡೆದಿದ್ದು, ಈ ಘಟನೆ ಖಂಡನಾರ್ಹ ಎಂದಿದ್ದಾರೆ.
ರಾಜ್ಯದಲ್ಲಿ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ದ್ವೇಷ ರಾಜಕಾರಣಕ್ಕೆ ಈ ಘಟನೆ ಮತ್ತೊಂದು ಉದಾಹರಣೆ ಎಂದು ಆರ್. ಅಶೋಕ್ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ದಿನ ಬೆಳಗಾದರೆ ವಿಪಕ್ಷ ಶಾಸಕರ ಮೇಲೆಕೊಲೆ ಯತ್ನ, ವಿಪಕ್ಷ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಇವೆಲ್ಲವೂ ಸರ್ವೆ ಸಾಮಾನ್ಯವಾಗುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ ಎಂದು ದೂರಿದ್ದಾರೆ.
ಸಿ.ಟಿ. ರವಿ ಟೀಕೆ
ಈ ಘಟನೆಯನ್ನು ಖಂಡಿಸಿ ಮಾತನಾಡಿರುವ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಪೋರೇಟ್ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಾಲಿಕೆ ಸದಸ್ಯೆದೂರಿನ ಮೇಲೆ ಬಿಜೆಪಿ ಕಾರ್ಯಕರ್ತೆ ಸುಜಾತ ಅವರನ್ನು ಪೊಲೀಸರು ಬಂಧಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ, ಮಹಿಳಾ ದೌರ್ಜನ್ಯ ಕೂಡಲೇ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಗ್ರಹಿಸಿದರು.
ಕಾಂಗ್ರೆಸ್ಸನವರು ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಮಾನವೀಯ ಜಗತ್ತು ತಲೆತಗ್ಗಿಸುವಂತೆನಡೆದುಕೊಂಡಿದ್ದಾರೆ. ರಾಜ್ಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಸುಳ್ಳು ದೂರು ನೀಡಿರುವ ಕಾಂಗ್ರೆಸ್‌ನ ಪಾಲಿಕೆ ಸದಸ್ಯೆಯ ವಿರುದ್ಧವೂ ಕ್ರಮ ಆಗಬೇಕು. ಪೊಲೀಸರು ಕಾಂಗ್ರೆಸ್ ನಗರ ಪಾಲಿಕೆ ಸದಸ್ಯೆ ಅಡಿಯಾಳಿನಂತೆಕೆಲಸ ಮಾಡಿದ್ದಾರೆ. ಅವರ ವಿರುದ್ಧವೂ ಕ್ರಮ ಆಗಬೇಕು ಎಂದು ಸಿ.ಟಿ. ರವಿ ಹೇಳಿದರು.


























