
ಬೆಂಗಳೂರು, ಜೂ. ೬- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ರವರೇ ಹೊಣೆಗಾರರು ಎಂದು ಆರೋಪಿಸಿರುವ ಬಿಜೆಪಿ-ಜೆಡಿಎಸ್ ಈ ಮೂವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ ಇವರುಗಳು, ಈ ಘಟನೆಗೆ ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಪಕ ಭದ್ರತಾ ವ್ಯವಸ್ಥೆಯೇ ಕಾರಣ. ಪೊಲೀಸ್ ಆಯುಕ್ತರ ಅಮಾನತು ಕೇವಲ ನಾಟಕ ಎಂದು ವಾಗ್ದಾಳಿ ನಡೆಸಿದರು.
ಈ ಪ್ರಕರಣದಲ್ಲಿ ಆರೋಪಿ ನಂಬರ್ ೧ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಪಿ ನಂ.- ೨ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಪಿ ನಂ.-೩ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹಾಗಾಗಿ ಈ ಮೂವರು ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕಾಲ್ತುಳಿತ ಘಟನೆ ಬಗ್ಗೆ ಮ್ಯಾಜಿಸ್ಟ್ರೀಯಲ್ ನ್ಯಾಯಾಲಯ ತನಿಖೆ, ಸಿಐಡಿ ತನಿಖೆಗೂ ಆದೇಶಿಸಿದೆ. ಒಂದು ಘಟನೆಗೆ ಮೂರು ತನಿಖೆಗಳು ಎಂದು ವ್ಯಂಗ್ಯವಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ನಿವೃತ್ತ ನ್ಯಾಯಮೂರ್ತಿ ಬದಲು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯವರಿಂದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪೊಲೀಸರನ್ನು ಹರಕೆಯ ಕುರಿ ಮಡಾಲು ಹೊರಟ್ಟಿದ್ದಾರೆ. ಮೊಸರು ತಿಂದಿದ್ದು ನೀವು, ಕೆಸರು ಹಚ್ಚಿದ್ದು ಪೊಲೀಸರಿಗೆ ಎಂದು ಆರ್. ಅಶೋಕ್ ಹರಿಹಾಯ್ದರು.
ಆರ್‌ಸಿಬಿಯವರು ಬಲವಂತಾಗಿ ಕಾರ್ಯಕ್ರಮ ಮಾಡಿದರು ಎಂದು ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. ಆದರೆ ಏಕೆ ನಿಷೇಧಾಜ್ಞೆ ಜಾರಿ ಮಾಡಲಿಲ್ಲ. ಈ ಪ್ರಕರಣದಲ್ಲಿ ಸರ್ಕಾವೇ ಅಪರಾಧಿ. ಯಾರು ಏನೇ ಹೇಳಿದರೂ ಕಾರ್ಯಕ್ರಮ ಮಾಡಬೇಕು ಎಂದಿದ್ದು ಸರ್ಕಾರ. ಇಲ್ಲಿ ಸರ್ಕಾರವೇ ಅಪರಾಧಿ ಸ್ಥಾನದಲ್ಲಿದೆ. ಹಾಗಾಗಿ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ, ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಲ್ಲ ಎಂದು ಅಶೋಕ್ ಹೇಳಿದರು.
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಜ್ಯ ಸರ್ಕಾರ ವಿಧಾನಸೌಧದ ಮುಂದೆ ಸಮಾರಂಭ ಮಾಡುವ ಅಗತ್ಯ ಏನಿತ್ತು. ತರಾತುರಿಯಲ್ಲಿ ಸಮಾರಂಭ ಮಾಡಿದ್ದು ಏಕೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನ ಕಾಲ್ತುಳಿತದಿಂದ ಸತ್ತಿದ್ದರೆ, ಉಪಮುಖ್ಯಮಂತ್ರಿಗಳು ಕ್ರಿಡಾಂಗಣದಲ್ಲಿ ಕಪ್ಪಿಗೆ ಮುತ್ತಿಟ್ಟು ಸಂಭ್ರಮ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪೊಲೀಸ್ ಅಧಿಕಾರಿಗಳನ್ನು ಹರಕೆಯ ಕುರಿ ಮಾಡುವ ಬದಲು ತಾವೇ ಜವಾಬ್ದಾರಿ, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಸಂಭ್ರಮಾಚಾರಣೆಗೆ ಅನುಮತಿ ಕೊಟ್ಟಿದ್ದು ಯಾರು. ಪರವಾನಗಿ ಇಲ್ಲದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಏಕೆ ಹೋದರು. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ಉದ್ಧಟತನಕ್ಕೆ ೧೧ ಜೀವಗಳು ಬಲಿಯಾಗಿವೆ. ಸರ್ಕಾರ ಮಾಡಿರುವ ತಪ್ಪನ್ನು ಮುಚ್ಚಿಕೊಳ್ಳುವುದು ಪೊಲೀಸರ ಅಮಾನತು ಮಾಡಿದ್ದಾರೆ. ಇದು ರಾಜ್ಯಕ್ಕೆ ಕೆಟ್ಟ ಹೆಸರು ಎಂದು ಹೇಳಿದರು.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಇದೇ ಪೊಲೀಸ್ ಆಯುಕ್ತರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈಗ ಅವರನ್ನು ಅಮಾನತು ಮಾಡುತ್ತಿರೀ ಹೇಗೆ. ಅಮಾನತು ಮಾಡಿರುವ ಸೆಂಟ್ರಲ್ ಡಿಸಿಪಿ ಯತೀಂದ್ರ ಸಿದ್ಧರಾಮಯ್ಯ ಅವರ ಆಪ್ತರು. ೧೫ ದಿನ ಮುಗಿಯುವವರೆಗೂ ಈ ಸಸ್ಪೆಂಡ್ ನಾಟಕ ನಂತರ ಉನ್ನತ ಮಟ್ಟದ ಪ್ರಮೋಷನ್ ಕೊಡುತ್ತೀರಿ ಎಂದು ಕಿಡಿಕಾರಿದರು.
ಪೊಲೀಸ್ ಆಯುಕ್ತರು ವಿಧಾನಸೌಧದ ಮುಂದೆ ಸ್ಟೇಡಿಯಂ ಎರಡೂ ಕಡೆ ಭದ್ರತಾ ಕಾರಣಕ್ಕೆ ಸಮಾರಂಭ ಬೇಡ ಎನ್ನುತ್ತಾರೆ. ಆದರೆ ಮುಖ್ಯಮಂತ್ರಿಗಳ ಜತೆ ೨೪ ಗಂಟೆ ಗೋವಿಂದ ಗೋವಿಂದ ಎಂದು ಹೇಳುವ ವ್ಯಕ್ತಿ ಪೊಲೀಸ್ ಕಮಿಷನರ್‌ಗೆ ದೂರವಾಣಿ ಮಾಡಿ ಒತ್ತಡ ಹಾಕುತ್ತಾರೆ ಎಂದು ಕುಮಾರಸ್ವಾಮಿ ದೂರಿದರು.
ಕಾಲ್ತುಳಿತದಿಂದ ಜನ ಸತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಮ್ಮಗನನ್ನು ಕರೆದುಕೊಂಡು ಜನಾರ್ಧನ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿನ್ನುತ್ತಾರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಟೇಡಿಯಂಗೆ ಹೋಗಿ ಕಪ್‌ಗೆ ಮುತ್ತು ಕೊಡುತ್ತಾರೆ ಎಂದು ಕಿಡಿಕಾರಿ, ಅಧಿಕಾರಿಗಳು ಹೇಳಿದರೂ ಅದನ್ನು ಒಪ್ಪದೆ ಚೆಲ್ಲಾಟವಾಡಿದವರು ಸರ್ಕಾರದವರು. ಇವರಿಗೇನು ಮಾನ ಮರ್ಯಾದೆ ಇದೆಯ ಎಂದು ಕುಮಾರಸ್ವಾಮಿ ಹರಿಹಾಯ್ದರು.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ರವರನ್ನು ಕಾಂಗ್ರೆಸ್‌ನಿಂದ ಹೊರ ಹಾಕಬೇಕು ಎಂದು ಕುಮಾರಸ್ವಾಮಿ ಕಾಂಗ್ರೆಸ್ ಹೈಕಮಾಂಡ್‌ನ್ನು ಆಗ್ರಹಿಸಿದರು.