ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಬೃಹತ ಪ್ರತಿಭಟನೆ

ಸಂಜೆವಾಣಿ ವಾರ್ತೆ,
ವಿಜಯಪುರ,ಮೇ. ೩೧ : ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿನ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರದ ವಿರುದ್ಧ ಕೆಲ ಘಂಟೆಗಳ ಕಾಲ ಘೋಷಣೆಗಳನ್ನು ಕೂಗಿ ಧರಣಿ ಸತ್ಯಾಗ್ರಹವನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಸದರಾದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಡ ರೋಗಿಗಳಿಗೆ ವರದಾನವಾಗಿರುವ ಈ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಬಡವರ ವಿರೋಧಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರು ಬಡವರು ಮಾತ್ರ. ಬಡವರಿಗೆ ಅನುಕೂಲಕರವಾದ ಈ ಕೇಂದ್ರಗಳನ್ನು ವಿನಾಕಾರಣ ಸ್ಥಗಿತಗೊಳಿಸುವ ಅರ್ಥವೇನು?. ಸಚಿವ ದಿನೇಶ ಗುಂಡೂರಾವ್, ಮುಖ್ಯಮಂತ್ರಿ ಸಿದ್ಧರಾಮ ಅವರ ಪಕ್ಷದ ಮುಖಂಡರು ಶ್ರೀಮಂತರಿರಬಹುದು, ಅವರು ಜಿಲ್ಲಾ ಆಸ್ಪತ್ರೆಗೆ ಹೋಗುವುದಿಲ್ಲ. ಬಡವರ ವಿರೋಧಿ ನಿರ್ಧಾರ ಕೈಗೊಂಡಿರುವ ಸರ್ಕಾದ ಕ್ರಮ ಖಂಡನೀಯ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು. ಬೇರೆ ಮೆಡಿಕಲ್‌ಗಳಲ್ಲಿ ೧೦೦ರೂ ಗೆ ಸಿಗುವಂತಹ ಔಷಧಿ ಜನೌಷಧಿ ಮಳಿಗೆಗಳಲ್ಲಿ ೧೦ ರೂಪಾಯಿಗೆ ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಆದರೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರು ಮೆಡಿಕಲ್ ಮಾಫಿಯಾದವರ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡುತ್ತಿದ್ದಾರೆಯೇ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಮಾತೆತ್ತಿದರೆ ಅಹಿಂದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ ನೀವೆ ಕುಳಿತುಕೊಂಡು ಜನೌಷಧಿ ತೆಗೆಸುವ ಮೂಲಕ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ. ಇದು ಸರಿಯಾದ ಕ್ರಮವಲ್ಲ, ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಜಿಗಜಿಣಗಿ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು, ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಸರ್ಕಾರದ ಯೋಜನೆಯ ವಿರುದ್ದ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ, ರಾಮರಾಜ್ಯ ಮಾಡುತ್ತೇನೆ ಎಂದವರು ಇವರು ರಾವಣ ರಾಜ್ಯ ಮಾಡಿದ್ದಾರೆ, ರಾಕ್ಷಸ ರಾಜ್ಯ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಪ್ರಧಾನಮಂತ್ರಿ ಜನ ಔಷಧಿ ಕೇಂದ್ರವನ್ನು ಎಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿ, ಈ ಆದೇಶಕ್ಕೆ ಸಮಜಾಯಿಸಿ ಸರಕಾರಿ ಆಸ್ಪತ್ರೆಯಲ್ಲಿ ಔಷಧಿಗಳನ್ನ ಮಾರಾಟ ಮಾಡುವಂತಿಲ್ಲ ಎನ್ನುವ ನಿಯಮದಡಿ ಕಾರಣ ಹೇಳಿ ಸಮಾಜಾಯಿಸಿ ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಹೊರಹಾಕಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡುವ ಔಷಧಿಗಳು ಲಭ್ಯ ಇಲ್ಲಾ ಅಂದ್ರೇ ರೋಗಿಗಳು ಹೊರಗಡೆ ಹೋಗಿ ಜನ ಔಷಧಿ ಕೇಂದ್ರವನ್ನು ಹುಡುಕಾಡಬೇಕಾ? ಔಷಧಿ ಕೇಂದ್ರ ಸಿಗದೇ ಇದ್ದ ಪಕ್ಷದಲ್ಲಿ ರೋಗಿಗಳು ಅನಾವಶ್ಯಕವಾಗಿ ಹೆಚ್ಚಿನ ದರದ ಔಷಧಿಯನ್ನು ಖರೀದಿ ಮಾಡುವ ಅನಿವಾರ್ಯತೆ ಹುಟ್ಟಿ ಹಾಕಿದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರ ಈ ನಿರ್ಣಯವನ್ನು ಖಂಡಿಸುವೆ. ಸರಕಾರಿ ಆಸ್ಪತ್ರೆಯಲ್ಲಿ ಔಷಧ ಸಿಗುತ್ತಿಲ್ಲ ಅಥವಾ ಲಭ್ಯವಿಲ್ಲ ಎಂದಾಗ ಕನಿಷ್ಠ ಪಕ್ಷ ರೋಗಿಗಳು ಕಡಿಮೆಯ ಖರ್ಚಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಾದರೂ ಖರೀದಿಸುವ ಅನುಕೂಲವಿತ್ತು, ತಮ್ಮ ವೈಯಕ್ತಿಕ ರಾಜಕಾರಣದಿಂದ ಈ ನಿರ್ಣಯ ಅದೆಷ್ಟೋ ರೋಗಿಗಳಿಗೆ ತೊಂದರೆ ಕೊಡುತ್ತಿದೆ ಎಂದರು.
ಈ ಸದರ್ಭದಲ್ಲಿ ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ಬೀಜ ಮತ್ತು ಸಾವಯವ ನಿಗಮದ ಮಾಜಿ ಅಧ್ಯಕ್ಷರಾದ ವಿಜುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಬಿಜೆಪಿ ಮುಖಂಡರಾದ ಸುರೇಶ ಬಿರಾದಾರ, ಉಮೇಶ ಕೋಳಕೂರ, ಸಂಜಯ ಐಹೋಳ್ಳಿ, ಎಸ್.ಎ.ಪಾಟೀಲ, ವಿಜಯ ಜೋಶಿ, ರವಿಕಾಂತ ಬಗಲಿ, ಕಾಂತು ಶಿಂಧೆ, ರಾಜೇಶ ತವಸೆ, ಮಂಜುನಾಥ ಬಿಸೆ, ಪಾಪುಸಿಂಗ ರಜಪೂತ, ಚನ್ನು ಚಿನಗುಂಡಿ, ಸಿದ್ದು ಮಲ್ಲಿಕಾರ್ಜುನಮಠ, ಬಸವರಾಜ ಬೈಚಬಾಳ, ಮಹಾನಗರ ಪಾಲಿಕೆ ಸದಸ್ಯರಾದ ರಾಹಲ ಜಾಧವ, ಕಲ್ಮೇಶ ಹಿರೇಮಠ, ಸಂತೋಷ ನಿಂಬರಗಿ, ಸಂದೀಪ ಪಾಟೀಲ, ಸಂಪತ ಕೋಹಳ್ಳಿ, ಸುಮಂಗಲಾ ಕೋಟಿ, ಮಂಗಲಾ, ಛಾಯಾ ಮಸಿ, ಭಾರತಿ ಭುಯ್ಯಾರ, ಭಾರತಿ ಶಿವಣಗಿ, ಸುಶ್ಮೀತಾ ವಡಕರ ಸೇರಿದಂತೆ ಬಿಜೆಪಿಯ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.