ಬಿಜೆಪಿಯಿಂದ ಧರ್ಮಸ್ಥಳ ಚಲೋ ಬೃಹತ್ ಸಮಾವೇಶ

ಎನ್‌ಐಎ ತನಿಖೆಗೆ ಪಟ್ಟು
ಬೆಂಗಳೂರು, ಸೆ. ೧-
ಧರ್ಮಸ್ಥಳ ವಿರುದ್ಧದ ಷಡ್ಯಂತ್ರ ಖಂಡಿಸಿ ಹಾಗೂ ಧರ್ಮಸ್ಥಳ ಬುರುಡೆ ಪ್ರಕರಣದ ಸಂಪೂರ್ಣ ತನಿಖೆ ಎನ್‌ಐಎಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಇಂದು ಧರ್ಮಸ್ಥಳ ಚಲೋ ನಡೆಸಿ ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನು ನಡೆಸಿತು.


ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ಧರ್ಮಸ್ಥಳ ಚಲೋ ಹಾಗೂ ಸಮಾವೇಶ ಬಿಜೆಪಿಯ ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಯಿತು.
ಧರ್ಮದೆಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಹಾಗೂ ಧರ್ಮಸ್ಥಳ ಮಂಜುನಾಥಸ್ವಾಮಿಯ ಭಕ್ತರು ಭಾಗಿಯಾಗಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಧರ್ಮಸ್ಥಳದ ಬುರುಡೆ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.


ಬಿಜೆಪಿಯ ಬಹುತೇಕ ನಾಯಕರು ಹಾಗೂ ಕಾರ್ಯಕರ್ತರುಗಳು ನಿನ್ನೆ ರಾತ್ರಿಯಿಂದಲೇ ಧರ್ಮಸ್ಥಳದತ್ತ ಹೆಜ್ಜೆ ಹಾಕಿದ್ದು, ಇಂದು ಬೆಳಿಗ್ಗೆಯೂ ಸಹ ಮಾಜಿ ಸಚಿವ, ಶಾಸಕ ಗೋಪಾಲಯ್ಯ, ಎಸ್.ಆರ್. ವಿಶ್ವನಾಥ್, ರಾಮಮೂರ್ತಿ, ಸತೀಶ್‌ರೆಡ್ಡಿ, ರವಿಸುಬ್ರಹ್ಮಣ್ಯ, ಉದಯ ಗರುಡಾಚಾರ್, ತುಮಕೂರು ನಗರ ಶಾಸಕ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಸೇರಿದಂತೆ ಬೆಂಗಳೂರು ಹಾಗೂ ರಾಜ್ಯದ ಹಲವು ಬಿಜೆಪಿ ಶಾಸಕರುಗಳ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರುಗಳು ತಂಡೋಪ ತಂಡವಾಗಿ ನೂರಾರು ವಾಹನಗಳಲ್ಲಿ ಧರ್ಮಸ್ಥಳಕ್ಕೆ ಆಗಮಿಸಿ ಮಧ್ಯಾಹ್ನ ನಡೆದ ಧರ್ಮ ಸಮಾವೇಶದಲ್ಲಿ ಭಾಗಿಯಾದರು.


ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರರೆಡ್ಡಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಮೋಹನ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಸಚಿವರುಗಳಾದ ಸಿ.ಟಿ. ರವಿ, ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಈ ಧರ್ಮ ಸಮಾವೇಶದಲ್ಲಿ ಭಾಗಿಯಾಗಿ ಧರ್ಮಸ್ಥಳ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿದರಲ್ಲದೆ, ಬುರುಡೆ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಧರ್ಮ ಸಮಾವೇಶಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲ ನಾಯಕರು, ಶಾಸಕರುಗಳು ಬೆಳಿಗ್ಗೆಯೇ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.


ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ ಈಗ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿದ್ದು, ಇಂದಿನ ಧರ್ಮಸ್ಥಳ ಚಲೋ ಮತ್ತು ಸಮಾವೇಶದ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದೆ.


ಧರ್ಮಸ್ಥಳಕ್ಕೆ ಆಗಮಿಸಿದ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ಊಟ ಉಪಚಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಸಮಾವೇಶದಲ್ಲಿ ಭಾಗಿಯಾದ ಪ್ರತಿಯೊಬ್ಬರೂ ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ಖಂಡಿಸಿ, ಧರ್ಮಸ್ಥಳದ ಪರ ನಾವಿದ್ದೇವೆ ಎಂಬ ಘೋಷಣೆಗಳನ್ನು ಕೂಗಿದರು.


ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಎಸ್ ನಿನ್ನೆ ಧರ್ಮಸ್ಥಳಕ್ಕೆ ಸತ್ಯಯಾತ್ರೆ ನಡೆಸಿತ್ತು.