ಬೆಂಗಳೂರು, ಅ. ೩೦- ರಾಜ್ಯದ ಕಾಂಗ್ರೆಸ್ ಸರ್ಕಾರ ನೆರೆಯ ಕೇರಳದ ವಯನಾಡುವಿಗೆ ನೆರವು ನೀಡುತ್ತಿರುವ ನಡುವೆಯೇ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೇರಳದ ವಯನಾಡು ಪ್ರವಾಸವನ್ನು ಉತ್ತೇಜಿಸುತ್ತಿರುವುದಕ್ಕೆ ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ. ಕೆಎಸ್‌ಟಿಡಿಸಿಗೆ ನಮ್ಮ ಕರ್ನಾಟಕದ ಪ್ರವಾಸಿ ತಾಣಗಳು ಕಾಣಿಸುತ್ತಿಲ್ಲವೆ. ಪ್ರಿಯಾಂಕ ಗಾಂಧಿ ಅವರನ್ನು ಮೆಚ್ಚಿಸಲು ಕರುನಾಡನ್ನು ಬಲಿಕೊಡುತ್ತಿದ್ದೀರಾ. ನಿಮ್ಮ ಆಡಳಿತ ಕರ್ನಾಟಕ ಸರ್ಕಾರಕ್ಕಿಂತಲೂ ವಯನಾಡು ಸೇವಾ ಕೇಂದ್ರದಂತಾಗಿದೆ ಎದು ಟೀಕಿಸಿದ್ದಾರೆ.
ರಾಜ್ಯಕ್ಕೆ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಓಲೈಸಲು ಅವರ ಮುಂದೆ ತಲೆ ಬಗ್ಗಿಸುವ ಮುಖ್ಯಮಂತ್ರಿ ಬೇಕಿಲ್ಲ. ರಾಜ್ಯದ ಪರವಾಗಿ ಕಳಕಳಿಯಿಂದ ಕೆಲಸ ಮಾಡುವವರು ಬೇಕಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಯನಾಡು ಜಿಲ್ಲಾಧಿಕಾರಿ ಮತ್ತು ಫಂಡ್ ರೈಸರ್ ಆಗಿ ಕೆಲಸ ಮಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಹಿಂದೆ ರಾಜ್ಯದ ಜನತೆಯ ಹತ್ತು ಕೋಟಿ ಹಣವನ್ನು ವಯನಾಡುವಿಗೆ ನೀಡಲಾಗಿತ್ತು. ಹಾಗೆಯೇ ವಯನಾಡುವಿನಲ್ಲಿ ಭೂ ಕುಸಿತ ಆದಾಗ ನೂರು ಮನೆಗಳನ್ನು ನಿರ್ಮಾಣ ಮಾಡಲು ನೆರವು ನೀಡಲಾಗಿತ್ತು. ಇಷ್ಟೇ ಅಲ್ಲದೆ, ವಯನಾಡುವಿನಲ್ಲಿ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿಗೆ ೧೫ ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ನೀಡಿತ್ತು. ನಮ್ಮ ರಾಜ್ಯದ ಜನತೆ ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿಗಳು ವಯನಾಡುವಿಗೆ ನೆರವು ನೀಡುವ ಅಗತ್ಯ ಇತ್ತೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಉತ್ತರಕರ್ನಾಟಕದಲ್ಲಿ ಪ್ರವಾಹದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಪರಿಹಾರ ನೀಡಿಲ್ಲ. ಆದರೆ ನಕಲಿ ಗಾಂಧಿಗಳನ್ನು ಮೆಚ್ಚಿಸಲು ಹೈಕಮಾಂಡ್‌ನ ಎಟಿಎಂ ಆಗಿ ರಾಜ್ಯ ಸರ್ಕಾರ ವರ್ತಿಸುತ್ತಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.
























