ರಾಹುಲ್‌ಗಾಂಧಿ ದೇಶ ವಿರೋಧಿ ಹೇಳಿಕೆಗೆ ಬಿಜೆಪಿ ಖಂಡನೆ

ತುಮಕೂರು, ಆ. ೯- ದೇಶ ರಕ್ಷಣೆ ಮಾಡುತ್ತಿರುವ ಭಾರತೀಯ ಸೇನೆ ವಿರುದ್ಧ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವುದನ್ನು ಜಿಲ್ಲಾ ಬಿಜೆಪಿ ಸ್ವಾಗತಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಹೇಳಿದ್ದಾರೆ.


ಲೋಕಸಭೆಯ ವಿರೋಧ ಪಕ್ಷದ ನಾಯಕನ ಜವಾಬ್ದಾರಿಯನ್ನು ಮರೆತಂತಿರುವ ರಾಹುಲ್‌ಗಾಂಧಿ ಅವರು ಕೇವಲ ಪ್ರಚಾರ ಉದ್ದೇಶದಿಂದ ದೇಶ ವಿರೋಧಿ ಹೇಳಿಕೆಯನ್ನು ಹಿಂದೆಯೂ ನೀಡಿ ಕೋರ್ಟ್ ತರಾಟೆಗೆ ಒಳಗಾಗಿದ್ದರು. ಅದನ್ನು ಗಮನದಲ್ಲಿಟ್ಟುಕೊಳ್ಳದೆ ಪದೇ ಪದೇ ದೇಶ ವಿರೋಧಿ ಹೇಳಿಕೆಗಳನ್ನು ನೀಡುವ ಚಾಳಿ ಮುಂದುವರೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.


ಯಾವುದೇ ಲೋಪಗಳಿದ್ದರೆ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಚರ್ಚೆ ಮಾಡಲು ಅವಕಾಶ ಇದ್ದಾಗಲೂ ಸದನದ ಹೊರಗೆ ದೇಶ ವಿರೋಧಿ ಹೇಳಿಕೆ ನೀಡುತ್ತಿರುವುದು ದೇಶ ಕಾಯುವ ಸೇನಾನಿಗಳಿಗೆ ಮತ್ತು ದೇಶದ ಪ್ರಜೆಗಳಿಗೆ ಮಾಡಿರುವ ಅವಮಾನವಾಗಿದೆ. ಯಾವುದೇ ದಾಖಲೆ ಇಲ್ಲದೆ ಚೀನಾ ನಮ್ಮಎರಡು ಸಾವಿರ ಚದುರ ಕಿಲೋ ಮೀಟರ್ ಭೂ ಪ್ರದೇಶವನ್ನು ಆಕ್ರಮಿಸಿಕೊಂಡು ೨೦ ಭಾರತೀಯ ಸೈನಿಕರನ್ನು ಕೊಂದಿದೆ. ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರ ಮೇಲೆ ಚೀನಾ ಸೈನಿಕರು ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ನೀಡಿರುವ ತೀರ್ಪು ದೇಶದ ಜನರ ಗೌರವದ ಪ್ರತೀಕವಾಗಿದೆ ಎಂದಿದ್ದಾರೆ.


ಕೋರ್ಟ್ ನೀಡಿರುವ ತೀರ್ಪನ್ನು ಕಡೆಗಣಿಸಿ ರಾಹುಲ್‌ಗಾಂಧಿ ಸಹೋದರಿ ಪ್ರಿಯಾಂಕಗಾಂಧಿ ಅವರು ತಮ್ಮ ಸಹೋದರನ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ. ಅವರುಗಳ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ. ರಾಹುಲ್‌ಗಾಂಧಿ ಅವರಿ ಗೆಉತ್ತಮ ವೈದ್ಯರ ಸಲಹೆ ಅಗತ್ಯವಿದೆ. ದೇಶ ವಿರೋಧಿ ಹೇಳಿಕೆ ನೀಡುವುದನ್ನು ರಾಹುಲ್‌ಗಾಂಧಿ ಹಾಗೂ ಕಾಂಗ್ರೆಸ್‌ನವರು ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.