ಭಕ್ತಿ ಭಾವದಿಂದ ಜರುಗಿದ ಬೀದರ ಜಗನ್ನಾಥ ರಥಯಾತ್ರೆ

ಬೀದರ :ಜು.3:ಜಗನ್ನಾಥ ಮಂದಿರ ದೇವಸ್ಥಾನ, ಶ್ರಿ ಕೃಷ್ಣ ಚೈತನ್ಯ ಟ್ರಷ್ಟ ವತಿಯಿಂದ ಬೀದರನಲ್ಲಿ ಹಮ್ಮಿಕೊಂಡ ಜಗನ್ನಾಥ ರಥಯಾತ್ರೆ ರಾಂಪೂರೆ ಕಾಲೋನಿಯ ಸತ್ಯನಾರಾಯಣ ಮಂದಿರದಿಂದ ಚಿಕಪೇಟ ಜಗನ್ನಾಥ ಮಂದಿರದವರೆಗೆ ಭಕ್ತಿ ಭಾವದಿಂದ ಜರುಗಿತು. ರಥಯಾತ್ರೆಗಾಗಿ ಮುಂಜಾನೆ 11-30ಗಂಟೆಗೆ ರಾಂಪೂರೆ ಕಾಲೋನಿಯ ಸತ್ಯನಾರಾಯಣ ಮಂದಿರಕ್ಕೆ ಆಗಮಿಸಿದ ಎಲ್ಲರಿಗೂ ಸತ್ಯನಾರಾಯಣ ಮಂದಿರದ ಅಧ್ಯಕ್ಷರಾದ ಪ್ರಭಾಕರ ಮೈಲಾಪೂರೆರವರು ಸ್ವಾಗತ ಗೈದರು. ಪುಷ್ಪಾಲಂಕಾರದಿಂದ ಶೋಭಿತವಾದ ಕೃಷ್ಣ,ಬಲರಾಮ,ಸುಭದ್ರೆಯರಿದ್ದ ರಥಯಾತ್ರೆಗೆ ಸತ್ಯನಾರಾಯಣ ಮಂದಿರದಲ್ಲಿ ಬೃಂದಾವನದ ಇಸ್ಕಾನ್ ಪ್ರಮುಖರಾದ ಶ್ರೀಲ ಕಿಂಕರದಾಸ ಭಕ್ತ ಗೋಸ್ವಾಮಿ ಹಾಗೂ ನರಸಿಂಹ ದಿಕ್ಷಿತ್ ಮಹಾರಾಜರು ಗೋಪೂಜೆ ನೆರವೇರಿಸಿ ಸತ್ಯನಾರಾಯಣ ಹಾಗೂ ರಥಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಜನೆ ಗೈದು ಚಾಲನೆ ನೀಡಿದರು.ಬೀದರನ ಗಣ್ಯರಾದ ಬಂಡೆಪ್ಪಾ ಖಾಶೆಂಪೂರ,ಡಾ.ಶೈಲೇಂದ್ರ ಬೆಲ್ದಾಳೆ, ಈಶ್ವರಸಿಂಗ್ ಠಾಕೂರ,ಅಶೋಕ ರೇಜಂತಲ, ಹನುಮಯ್ಯಾ ಅಥರ್ಂ,ಸೋಮಶೇಖರ ಪಾಟೀಲ ಗಾದಗಿ ಮತ್ತೀತರ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿದರು. ಬೀದರ ಜಗನ್ನಾಥ ಮಂದಿರದ ಡಾ,ನೀಲೇಶ ದೇಶಮುಖ,ಶಿವರಾಮ ಜೋಷಿ, ಕವಿರಾಜ ಹಲಮಡಗಿ, ಸುಧೀರ ಶರ್ಮಾ, ಸಿದ್ರಾಮ ಏಕೆಳ್ಳಿಕರ್, ಅಭೀಶೇಕ ಆನಂದೆ, ಬಸವ ಚೇತನ್, ಸಂಧ್ಯಾ ಜೋಷಿ, ಆರತಿ ಶರ್ಮಾ, ಸಪ್ನಾ ಹಲಮಡಗಿ, ಅರುಣಾ ಅಳ್ಳೆ, ಸುಮೆಧಾ ದೇಶಮುಖ, ಶಾಲೀನಿ ವಿಶ್ವಕರ್ಮಾ, ಪುಷ್ಕರ್ ನೇತೃತ್ವ ವಹಿಸಿದರು. ರಥಯಾತ್ರೆ ಸಾಗುವ ದಾರಿಯನ್ನು ಕಸಬರಿಕೆ ಹಿಡಿದು ಬೀದರ ಗಣ್ಯರು ಶುಚಿಗೊಳಿಸುತ್ತಾ ಸಾಗಿದರು. ರಾಂಪೂರೆ ಕಾಲೋನಿಯ ಮಹಿಳೆಯರು ಸಮವಸ್ತ್ರಧಾರಿಯಾಗಿ ಕುಂಭಕಳಶಹೊತ್ತು ಸಾಗಿದರು.ರಥಯಾತ್ರೆಯಲ್ಲಿ ಪುಣೆಯ ಇಸ್ಕಾನ್‍ನ ಅಶೋಕ ಕೃಷ್ಣದಾಸಪ್ರಭು ಮತ್ತು ಮಾಯಾಪೂರದ ಪೂಜಾರಿರವರು ಆಸೀನರಾಗಿದ್ದರು. ರಥಯಾತ್ರೆ ಸಾಗುವ ದಾರಿಯುದ್ದಕ್ಕೂ ಕೋಲ್ಲಾಪೂರದ ರಂಗೋಲಿ ಕಲಾವಿದರು ಚಿತ್ರಿಸಿದ ರಂಗೋಲಿ ಕಣ್ಮನ ಸೆಳೆಯಿತು. ರಥದ ಮುಂದೆ ಎರಡೂ ಮಗ್ಗಲು ಉದ್ದವಾದ ಹಗ್ಗ ಕಟ್ಟಿದ್ದು ಒಂದೆಡೆ ಮಹಿಳೆಯರು ಇನ್ನೊಂದೆಡೆ ಪುರುಷರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ರಥ ಯಾತ್ರೆ ಸಾಗುವ ಎಂಟು ಕಿ.ಮಿ. ದಾರಿಯುದ್ದಕ್ಕೂ ರಥ ಎಳೆದು ಸಂಭ್ರಮಿಸಿದರು.ಕೀರ್ತನೆ ನರ್ತನೆ ಭಜನೆ ಮಾಡುತ್ತಾ ಡಿಜೆಸೌಂಡ್‍ನಲ್ಲಿ ಬ್ಯಾಂಡ್ನಲ್ಲಿ ಹಲಗೆಯಲ್ಲಿ ಲಯದ ಶ್ರದ್ಧಾಭಕ್ತಿಯ ಹಾಡುಗಳಿಗೆ ಹೆಜ್ಜೆಹಾಕುತ್ತಾ ಭಾವಪರವಶರಾಗಿ ಕುಣಿದು ಕುಪ್ಪಳಿಸುತ್ತಾ ಸಾಗಿದರು.ದಾರಿ ಮಧ್ಯದ ಮುಖ್ಯ ಸ್ಥಳಗಳಾದ ಮೈಲೂರ್ ವೃತ್ತನಲ್ಲಿ ಪದ್ಮಸಾಲಿ ಸಮಾಜದವರು, ರಾಮ್ ಚೌಕ್ ಹತ್ತಿರ ಸ್ಪರ್ಶಹಾಸ್ಪಿಟಲ್‍ನವರು, ಬಮ್ಮಗೊಂಡೇಶ್ವರ ವೃತ್ತನಲ್ಲಿ ರಾಜಸ್ತಾನಿ ಸಮಾಜದವರು,ಬಸವೇಶ್ವರ ವೃತ್ತದಲ್ಲಿ ರಜಪೂತ ಸಮಾಜದವರು,ಅಂಬೇಡ್ಕರ್ ವೃತ್ತದಲ್ಲಿ ನರೇಂದ್ರ ಮೋದಿ ಅಭಿಮಾನಿ ಸಂಘದವರು,ರೋಕಡೆ ಹನುಮಾನ ಮಂದಿರರಸ್ತೆಯಲ್ಲಿ ಗುಜರಾತಿ ಸಮಾಜದವರು,ವಿವಿಧ ಬಗೆಯ ಉಪಾಹಾರದ ವ್ಯವಸ್ಥೆ ಮಾಡಿದ್ದರು. ದಾರಿಯುದ್ದಕ್ಕೂ ಮಹಿಳೆ ಮಕ್ಕಳು ಯುವಕರು ವೃದ್ಧರು ಸೇರಿ ಎಲ್ಲಾ ವಯೋಮಾನದವರು ದೇವರ ಜಯಘೋಷ ಹಾಕುತ್ತಾ ಸಂಕೀರ್ತನೆ ನರ್ತನೆ ಗೈಯುತ್ತಾ ಸಾಗಿದರು. ದಾರಿ ಮಧ್ಯೆ ಮಳೆ ಸುರಿದರೂ ಜನ ಕದಲದೆ ರಥದೊಂದಿಗೆಯೇ ಇದ್ದದ್ದು ಜನರ ಶೃಧ್ಧಾಭಕ್ತಿಯ ಪರಾಕಾಷ್ಠೆಯಾಗಿ ಕಂಡಿತು.ದಾರಿಯುದ್ದಕ್ಕೂ ಶದ್ಧಾಳು ಮನೆಯವರು ರಥ ನಿಲ್ಲಿಸಿ ರಥಕ್ಕೆ ಪೂಜೆ ಸಲ್ಲಿಸಿದರು. ಮುಂಜಾನೆ 12-00 ಗಂಟೆಗೆ ಆರಂಭವಾದ ರಥಯಾತ್ರೆ ರಾತ್ರಿ 8-30 ಗಂಟೆಯವರೆಗೂ ಸಡಗರ ಸಂಭ್ರಮದಿಂದ ಹರ್ಷೋಲ್ಲಾಸದಿಂದ ಜರುಗಿತು.ರಾತ್ರಿ ಜಗನ್ನಾಥ ಮಂದಿರದಲ್ಲಿ ವಿಧಿವಿಧಾನಗಳ ಪೂಜೆಗೈಯ್ಯಲಾಯಿತು.ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಈ ಜಗನ್ನಾಥ ರಥಯಾತ್ರೆಯಲ್ಲಿ ಪಾಲ್ಗೊಂಡ ರಥಯಾತ್ರೆ ಸಮಿತಿಯ ಗೌರವಾಧ್ಯಕ್ಷರಾದ ರಾಮಕೃಷ್ಣನ್ ಸಾಳೆಯವರು ಮಾತಾಡುತ್ತಾ, ಪುರಿ ಜಗನ್ನಾಥ ಭಾರತದ ಸನಾತನ ಸಂಸ್ಕøತಿಯಲ್ಲಿ ಮಹತ್ವವುಳ್ಳ ನಾಲ್ಕು ಚಾರ್‍ಧಾಮ್‍ಗಳಲ್ಲಿ ಒಂದಾಗಿದೆ.ಅಲ್ಲಿನ ರಥಯಾತ್ರೆಗೆ ಸುಮಾರು 25 ಲಕ್ಷ ದೇಶವಿದೇಶದ ಜನ ಸೇರುತ್ತಾರೆ.ಅಲ್ಲಿ ಶ್ರಿಕೃಷ್ಣನೇ ಜಗನ್ನಾಥನಾಗಿ ನೆಲೆನಿಂತಿದ್ದಾನೆ. ಈಗಲೂ ನಾವು ಅಲ್ಲಿ ಶ್ರಿಕೃಷ್ಣನ ಲೀಲೆಗಳನ್ನು ಕಾಣಬಹುದಾಗಿದೆ. ಅಲ್ಲಿನ ಮಂದಿರದಲ್ಲಿ ಮಹಾಲಕ್ಷಿ?? ಬಂದು ಅಡುಗೆ ತಯ್ಯಾರಿಸುತ್ತಾಳೆಂಬ ನಂಬುಗೆಯಿದೆ. ಅಲ್ಲಿನ ರಥಯಾತ್ರೆಯಲ್ಲಿ ಕೃಷ್ಣನೇ ಬಂದು ಆಸೀನನಾಗುತ್ತಾನೆಂದು ನಂಬಲಾಗಿದೆ. ದೇವಲೋಕದಿಂದಲೂ ದೇವಾಧಿ ದೇವತೆಗಳು ಮಾರುವೇಶದಲ್ಲಿ ಬಂದು ಅಲ್ಲಿನ ರಥಯಾತ್ರೆ ವಿಕ್ಷಿಸುತ್ತಾರೆಂಬ ವಿಶ್ವಾಸವಿದೆ. ಹಾಗಾಗಿ ಅಲ್ಲಿಗೆ ಹೋಗಿ ಜನರು ದರ್ಶನ ಗೈದು ಅಲ್ಲಿನ ಪ್ರಸಾದ ಸ್ವೀಕರಿಸಲು ಹಂಬಲಿಸುತ್ತಾರೆ. ಮೊದಲು ಜಗನ್ನಾಥ ಮಂದಿರ ಪುರಿಯಲ್ಲಷ್ಟೇ ಇತ್ತು. ಇಸ್ಕಾನ್ ಸ್ಥಾಪಕರಾದ ಶ್ರೀಲ ಪ್ರಭುಪಾದರು 1968ರಲ್ಲಿ ಇಸ್ಕಾನ್ ಕೇಂದ್ರಗಳಲ್ಲಿ ಜಗನ್ನಾಥನನ್ನು ಪ್ರತಿಷ್ಠಾಪಿಸಿ, ಅಲ್ಲಿ ಪುರಿ ಜಗನ್ನಾಥನ ಯಾತ್ರಾ ಪಧ್ಧತಿಗಳನ್ನು ಅಳವಡಿಸಿ ಪ್ರಸಾದದ ವ್ಯವಸ್ಥೆ ಮಾಡಿದರು. ಜಗತ್ತಿನಲ್ಲೆಲ್ಲಾ ಇರುವ ದೂರದ ಭಕ್ತಾದಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಯಿತು.
ಬೀದರನಿಂದ ಓರಿಸ್ಸಾದ ಪುರಿ ಜಗನ್ನಾಥ ದೇವಸ್ಥಾನ 1150 ಕಿ.ಮಿ.ದೂರದಲ್ಲಿದೆ. ಅಲ್ಲಿಗೆ ಹೋಗಿ ಬರಲು ಇಲ್ಲಿನ ಮಹಿಳೆಯರಿಗೆ ಮಕ್ಕಳಿಗೆ ವೃದ್ಧರಿಗೆ ಬಡವರಿಗೆ ಕಷ್ಟವಾಗುವುದರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಬೀದರನಲ್ಲಿ ಕೃಷ್ಣಭಕ್ತರು ಸೇರಿ ಇಲ್ಲಿ ಜಗನ್ನಾಥ ಮಂದಿರ ಸ್ಥಾಪಿಸಲಾಗಿದೆ. ಪೂರಿಯಿಂದಲೇ ಕೃಷ್ಣ ಸುಭದ್ರೆ ಬಲರಾಮನ ವಿಗ್ರಹಗಳನ್ನು ತರಿಸಲಾಗಿದೆ.ಅಲ್ಲಿನ ಪೂಜಾರಿಯಿಂದಲೇ ಇದನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲೂ ಯಾತ್ರೆ ಪ್ರಸಾದ ಎಲ್ಲವೂ ಪುರಿ ಜಗನ್ನಾಥ ಮಂದಿರದ ಮಾದರಿಯಲ್ಲೇ ಮತ್ತು ಅಲ್ಲಿನ ರೀತಿ ರಿವಾಜುಗಳನ್ನು ಅನುಸರಿಸಿಯೇ ಮಾಡಲಾಗುತ್ತಿದೆ.ಮೊದಲನೇ ವರ್ಷ ಇಲ್ಲಿ ಶೋಭಾಯಾತ್ರೆ ಜರುಗಿತು.ಹೋದ ವರ್ಷ ಜಗನ್ನಾಥ ಯಾತ್ರೆ ಜರುಗಿತು.ಈ ವರ್ಷವೂ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಈ ಭಾಗದ ಹೆಚ್ಚಿನ ಶ್ರದ್ಧಾಳುಗಳು ಸೇರುತ್ತಿದ್ದಾರೆ.ಈಗ ಇದರ ಪ್ರಚಾರ ವ್ಯಾಪಕವಾಗಿ ಆಗಿದ್ದು ಹೆಚ್ಚಿನ ಜನರ ಸಹಯೋಗ ಸಿಗುತ್ತಿದೆ.ಪುರಿ ಮಾದರಿಯಲ್ಲೇ ಬೀದರನ ಜಗನ್ನಾಥ ಮಂದಿರ ಅಭಿವೃದ್ಧಿ ಹೊಂದುತ್ತಿದೆ.ಇಲ್ಲಿನ ರಥಯಾತ್ರೆಗೆ ಮತ್ತು ಇಲ್ಲಿನ ಮಂದಿರಕ್ಕೆ ಬಂದವರೆಲ್ಲಾ ಪುರಿಯ ಜಗನ್ನಾಥನ ಮಂದಿರಕ್ಕೆ ಹೋಗಿ ಬಂದಷ್ಟು ಮತ್ತು ಅಲ್ಲಿನ ರಥಯಾತ್ರೆಯಲ್ಲಿ ಪಾಲ್ಗೊಂಡಷ್ಠೇ ಆನಂದಾನುಭೂತಿ ಪಡೆಯುತ್ತಿದ್ದಾರೆ.ಇದು ಈ ಭಾಗದ ಸನಾತನ ಧರ್ಮ ಜಾಗೃತಿಯ ಪ್ರಮುಖ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದರು.
ಬೀದರ ಜಗನ್ನಾಥ ಮಂದಿರದ ಪ್ರಮುಖರಾದ ರಾಜಕುಮಾರ ಅಳ್ಳೆಯವರು ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತಾಡುತ್ತಾ, ಚಿಕ್ಕಪೇಟ ಹತ್ತಿರದ ಬೀದರ ಜಗನ್ನಾಥ ಮಂದಿರ ಈ ಭಾಗದ ಸನಾತನ ಶ್ರದ್ಧಾಳುಗಳನ್ನು ಹೆಚ್ಚು ಹೆಚ್ಚಾಗಿ ಸೆಳೆಯುತ್ತಿದೆ. ಪ್ರತಿದಿನ ಇಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ.ಪ್ರತಿ ರವಿವಾರ ಸಂಜೆ 6-00 ಗಂಟೆಯಿಂದ 9-00 ಗಂಟೆಯವರೆಗೆ ಇಲ್ಲಿ ಭಜನೆ ಕೀರ್ತನೆ ನರ್ತನೆ ಗೈಯ್ಯಲಾಗುತ್ತಿದೆ. ಪ್ರಸಾದದ ವ್ಯವಸ್ಥೆಯೂ ಮಾಡಲಾಗುತ್ತಿದೆ.ಆಗಾಗ ದೇಶ ವಿದೇಶದ ಇಸ್ಕಾನ್ ಸಾಧಕರನ್ನು ಕರೆಸಿ ಪ್ರವಚನ,ಸಂಕೀರ್ತನೆ ಮಾಡಿಸಲಾಗುತ್ತಿದೆ.ಇಲ್ಲಿ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಕೃಷ್ಣನ ಭಕ್ತರೇ ಎಂಬ ನೆಲೆಯಲ್ಲಿ ಇಲ್ಲಿಗೆ ಬರುವ ಎಲ್ಲರನ್ನು ಉಪಚರಿಸಲಾಗುತ್ತಿದೆ ಎಂದರು.