ಬೀದರ್ ಹೈಟೆಕ್ ಲ್ಯಾಬ್ ಅಂಡ್ ಡಯಾಗ್ನೋಸ್ಟಿಕ್ ಸೆಂಟರ್ ೧೫ನೇ ವಾರ್ಷಿಕೋತ್ಸವ

ಬೀದರ್,ಫೆ.೫: ನಗರದ ನೆಹರೂ ಸ್ಟೇಡಿಯಂ ರಸ್ತೆಯಲ್ಲಿರುವ ಬೀದರ್ ಹೈಟೆಕ್ ಲ್ಯಾಬ್ ಅಂಡ್ ಡಯಾಗ್ನೋಸ್ಟಿಕ್ ಸೆಂಟರ್‌ನ ೧೫ನೇ ವಾರ್ಷಿಕೋತ್ಸವ ಸಮಾರಂಭವನ್ನು ಪರಿಸರ ಜಾಗೃತಿ ಹಾಗೂ ಸಸಿ ವಿತರಣೆಯೊಂದಿಗೆ ಭವ್ಯವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬ್ರೀಮ್ಸ್ನ ತಂತ್ರಜ್ಞ ಅಧಿಕಾರಿ ಅರವಿಂದ ಕುಲಕರ್ಣಿ ಅವರು, “ಹಿಂದೆ ಆರೋಗ್ಯ ತಪಾಸಣೆಯ ನಂತರದ ಕ್ರಿಟಿಕಲ್ ಪರೀಕ್ಷೆಗಾಗಿ ತೆಲಂಗಾಣ ಹಾಗೂ ಮಹಾರಾಷ್ಟ್ರಕ್ಕೆ ತೆರಳಬೇಕಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ತರಹದ ಉನ್ನತ ಮಟ್ಟದ ಪರೀಕ್ಷೆಗಳು ಬೀದರ್‌ನಲ್ಲಿಯೇ ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿರುವುದು ಸಂತಸದ ಸಂಗತಿ” ಎಂದು ಹೇಳಿದರು. ಜೊತೆಗೆ, ಹೊಸ ವೈದ್ಯಕೀಯ ಆವಿಷ್ಕಾರಗಳ ಲಾಭ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಅಭಿಪ್ರಾಯಪಟ್ಟರು.
ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್ ಅವರು ಸಸಿ ವಿತರಿಸಿ ಮಾತನಾಡಿ, ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲ್ಯಾಬ್ ಆವರಣದಲ್ಲಿ ಆಕ್ಸಿಜನ್ ನೀಡುವ ಗಿಡಗಳನ್ನು ನೆಡುವಂತೆ ಹಾಗೂ ಪರೀಕ್ಷೆಗೆ ಬರುವ ಜನರಲ್ಲಿ ಪರಿಸರ ಮತ್ತು ಮಾಲಿನ್ಯ ಕುರಿತು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಲ್ಯಾಬ್‌ನ ಮಾಲೀಕರಾದ ಶಿವಾನಂದ ಅವರು ಮಾತನಾಡಿ, ಜನರ ಸಹಕಾರ ಮತ್ತು ವಿಶ್ವಾಸದಿಂದ ಸಂಸ್ಥೆ ೧೫ ವರ್ಷಗಳ ಯಶಸ್ವಿ ಸೇವೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನಿರಂತರವಾಗಿ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಗೌರವಿಸಿ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಸಸಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ. ರಾಜಶೇಖರ, ಅರವಿಂದ ಕುಲಕರ್ಣಿ, ಅಡೆಪ್ಪ ಪೊಲೀಸ್ ಪಾಟೀಲ (ಜನವಾಡಾ), ಮಧುಸೂದನ್, ಶರಣುಗಿರಿ ಹಾಗೂ ಲ್ಯಾಬ್‌ನ ಸಮಸ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.