
ಭಾಲ್ಕಿ: ಡಿ.21:ಮಾಜಿ ಸಚಿವ ಡಾ| ಭೀಮಣ್ಣಾ ಖಂಡ್ರೆ ಮತ್ತು ಲಿಂ. ಡಾ| ಚನ್ನಬಸವ ಪಟ್ಟದ್ದೇವರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು ಎಂದು ಬೀದರ ಸಂಸದ ಸಾಗರ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಲಕ್ಷ್ಮೀಬಾಯಿ ಖಂಡ್ರೆ ಪಬ್ಲಿಕ್ ಶಾಲೆಯಲ್ಲಿ ಲಿಂ.ಡಾ| ಚನ್ನಬಸವ ಪಟ್ಟದ್ದೇವರ 136ನೇ ಜಯಂತಿ ಮಹೋತ್ಸವ ನಿಮಿತ್ಯ ಶನಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಅತಿ ಹಿಂದುಳಿದ ಪ್ರದೇಶವಾದ ಭಾಲ್ಕಿಯನ್ನು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಮಾಜಿ ಸಚಿವ ಭೀಮಣ್ಣಾ ಖಂಡ್ರೆ ಹಾಗು ಲಿಂ.ಡಾ| ಚನ್ನಬಸವ ಪಟ್ಟದ್ದೇವರ ಶ್ರಮ ಸಾಕಷ್ಟಿದೆ. ಚನ್ನಬಸವ ಪಟ್ಟದ್ದೇವರು, ಡಾ| ಭೀಮಣ್ಣಾ ಖಂಡ್ರೆಯವರ ಅಖಂಡ ಆಶಿರ್ವಾದ ನಮ್ಮ ತಂದೆ ಸಚಿವ ಈಶ್ವರ ಖಂಡ್ರೆಯವರ ಪ್ರಯತ್ನದಿಂದ ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ ನಾನು ಭಾರತ ಸಂಸದನಾಗಿ ಆಯ್ಕೆಯಾಗಿದ್ದೇನೆ. ಪಟ್ಟದ್ದೇವರು ಮತ್ತು ಭೀಮಣ್ಣಾ ಖಂಡ್ರೆಯವರ ಶ್ರಮದಿಂದಲೇ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳದು ನಿಂತಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿಯೇ 21 ಶಾಲಾ ಕಾಲೇಜುಗಳನ್ನು ಕಟ್ಟಿ ಬೆಳೆಸಿದ ಕಾರ್ಯ ಡಾ| ಭೀಮಣ್ಣಾ ಖಂಡ್ರೆಯವರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಜಯಂತಿ ಮಹೋತ್ಸವದ ಪೂರ್ವಭಾವಿಯಾಗಿ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು.
ಬೀದರ ವಿಶ್ವವಿದ್ಯಾಲಯದ ಕುಲಪತಿ ಡಾ| ವಿ.ಎಸ್.ಪಾಟೀಲ ಮಾತನಾಡಿ, 108 ವರ್ಷಗಳಕಾಲ ಬಾಳಿ ಬದುಕಿದ ಲಿಂ.ಡಾ| ಚನ್ನಬಸವ ಪಟ್ಟದ್ದೇವರ ತತ್ವಾದರ್ಶಗಳು ಜನಮಾನಸಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವುದು ಪ್ರಶಂಶನೀಯವಾಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಸುರೇಂದ್ರನ್.ಆರ್, ಯುವ ಜನಾಂಗಕ್ಕೆ ಪೂಜ್ಯರ ಮೌಲ್ಯಗಳನ್ನು ತಿಳಿಸುವ ನಿಟ್ಟಿನಲ್ಲಿ ಪಟ್ಟದ್ದೇವರ ಜಯಂತಿ ಆಚರಿಸುತ್ತ ಬರುತ್ತಲಿದ್ದೇವೆ. ಆರೋಗ್ಯವಂತರಾಗಿದ್ದರೆ ಎಲ್ಲವನ್ನೂ ಸಾಧಿಸಬಹುದು. ಹೀಗಾಗಿ ಪೂಜ್ಯರ ಜಯಂತಿ ನಿಮಿತ್ಯ ಶಾಂತಿ ವರ್ಧಕ ಶಿಕ್ಷಣ ಸಂಸ್ಥಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು. ಇದೇವೇಳೆ ಸಂಸದ ಸಾಗರ ಖಂಡ್ರೆಯವರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯರೊಂದಿಗೆ ರೋಗಿಗಳ ಕ್ಷೇಮ ವಿಚಾರಿಸಿದರು. ವಿದ್ಯಾರ್ಥಿನಿ ಭೂಮಿಕಾ ಡಾ| ಭೀಮಣ್ಣಾ ಖಂಡ್ರೆ ಜೀವನ ಸಾಧನೆಯ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪರಮೇಶ್ವರ ನಾಯಕ, ಪಬ್ಲಿಕ್ ಶಾಲೆಯ ಪ್ರಾಚಾರ್ಯ ಸಂತೋಷ ಮಿರಾಜಕರ, ಆಡಳಿತಾಧಿಕಾರಿ ಅಂಕುಶ ಢೋಲೆ, ಬಿಕೆಐಟಿ ಪ್ರಾಚಾರ್ಯ ಡಾ| ಉದಯಕುಮಾರ ಕಲ್ಯಾಣೆ, ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯ ಭೀಮರಾವ ಗಿರಿ, ಸಿಬಿ ಕಾಲೇಜಿನ ಪ್ರಾಚಾರ್ಯ ಸಂತೋಷಕುಮಾರ ತೀರ್ಥ, ಬೀದರ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾದ ಸಚಿನ ಮಲ್ಕಾಪೂರೆ, ಶಿನಾಥ ಪಾಟೀಲ, ಆರೋಗ್ಯಾಧಿಕಾರಿ ಡಾ| ಅಬ್ದುಲ ಖಾದರ, ಚರ್ಮತಜ್ಞ ಡಾ| ವಿನಾಯಕ ಬಿಯಾಣಿ ಉಪಸ್ಥಿತರಿದ್ದರು. ಸುರೇಂದ್ರ. ಆರ್ ಸ್ವಾಗತಿಸಿದರು. ಭೀಮರಾವ ನಿರೂಪಿಸಿದರು. ಅಂಕುಶ ಢೋಲೆ ವಂದಿಸಿದರು.
ಯುವಕರು ಆರೋಗ್ಯವಂತರಾಗಿದ್ದರೆ ದೇಶ ಸುಭದ್ರವಾಗಿರುತ್ತದೆ. ಈ ನಿಟ್ಟಿನಲ್ಲಿ ಪೂಜ್ಯರ ಜಯಂತಿ ನಿಮಿತ್ಯ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸದ್ದು, ಎಲ್ಲಾ ಯುವಕ, ಯುವತಿಯರು ಇದರ ಲಾಭ ಪಡೆದುಕೊಳ್ಳಬೇಕು. ಪೂಜ್ಯರ ಮೌಲ್ಯಗಳು ತಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಬೇಕು. – ಸಾಗರ ಈಶ್ವರ ಖಂಡ್ದರೆ, ಸಂಸದರು, ಬೀದರ.























