ಚಿತ್ತಾಪುರದಲ್ಲಿ ಭೀಮ ಪಥಸಂಚಲನ

ಚಿತ್ತಾಪುರ,ಡಿ.1-ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಇಂದು ಸಂವಿಧಾನ ಸಮಾವೇಶ ಜರುಗಿತು.
ಸಮಾವೇಶಕ್ಕೂ ಮುನ್ನ ಪಟ್ಟಣದ ಚಿತಾವಲಿ ಚೌಕ್‍ನಿಂದ ಜನತಾ ಚೌಕ್, ಭುವನೇಶ್ವರಿ ಚೌಕ್, ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ಚೌಕ್ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದವರೆಗೆ ನಡೆದ ಪಥ ಸಂಚಲನದಲ್ಲಿ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಕೌಟಾ (ಬಿ) ಗ್ರಾಮದ ಸಿದ್ದರಾಮ ಶರಣರು ಬೆಲ್ದಾಳ ಸೇರಿ ವಿವಿಧ ಮಠಾಧೀಶರು, ವಿವಿಧ ಸಮಾಜದ ಮುಖಂಡರು ಸೇರಿ ಹಲವರು ಜನ ಭಾಗವಹಿಸಿದ್ದರು.

ಭೀಮ ಪಥ ಸಂಚಲನ ಸಾಗುವ ಮಾರ್ಗದುದ್ದಕ್ಕೂ ವಿವಿಧ ಸಮಾಜಗಳು ಬಳಸುವ ಧ್ವಜದ ಬಣ್ಣಗಳ ಬಟ್ಟಿಂಗ್ಸ್, ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು. ಸಂವಿಧಾನ ಪೀಠಿಕೆಯೊಂದಿಗೆ ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಅಂಬಿಗರ ಚೌಡಯ್ಯ, ನಾರಾಯಣ ಗುರು, ಮಹರ್ಷಿ ವಾಲ್ಮೀಕಿ, ಸಂತ ಸೇವಾಲಾಲ್, ಟಿಪ್ಪು ಸುಲ್ತಾನ್, ಶಿವಾಜಿ ಮಹಾರಾಜ, ಸಿದ್ದರಾಮೇಶ್ವರ, ವಿಶ್ವಕರ್ಮ, ಸರ್ವಜ್ಞ, ಮಹಾವೀರ, ನುಲಿಯ ಚಂದಯ್ಯ ಸೇರಿ ವಿವಿಧ ಸಮುದಾಯಗಳ ಶರಣರ ಭಾವಚಿತ್ರಗಳ ಕಟೌಟ್ ವಿವಿಧೆಡೆ ಅಳವಡಿಸಲಾಗಿತ್ತು.

ಷರತ್ತುಬದ್ಧ ಅನುಮತಿ
ಚಿತ್ತಾಪುರದಲ್ಲಿ ಭೀಮ ಪಥಸಂಚಲನ ಹಾಗೂ ಸಂವಿಧಾನ ಸಮಾವೇಶ ಆಯೋಜಿಸಲು ತಾಲ್ಲೂಕ ಆಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಟ್ಟಣದಲ್ಲಿ ಬ್ಯಾನರ್, ಬಂಟಿಂಗ್ಸ್, ಧ್ವಜಗಳನ್ನು ಅಳವಡಿಸಬೇಕು, ಪ್ರಚೋದನಕಾರಿ ಭಾಷೆ, ಘೋಷಣೆ ಮುದ್ರಿಸಬಾರದು. ತಹಶೀಲ್ದಾರ ಅವರು ವಿಧಿಸಿರುವ ಎಲ್ಲ ಷರತ್ತುಗಳನ್ನು ಪಾಲಿಸಬೇಕು. ಷರತ್ತು ಉಲ್ಲಂಘನೆಯಾದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅನುಮತಿ ರದ್ದು ಪಡಿಸಲಾಗುವುದು ಎಂಬ ಷರತ್ತು ವಿಧಿಸಲಾಗಿದೆ.