ಫೆ.3 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ;ವಿಚಾರ ಸಂಕಿರಣ

ಕಲಬುರಗಿ,ಜ.29: ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ರಾಜ್ಯ ಸಮಿತಿಯಿಂದ ಬೆಂಗಳೂರಿನ ಕುಮಾರಕೃಪಾ ರಸ್ತೆ ಗಾಂಧಿಭವನದಲ್ಲಿ ಫೆ. 3 ರಂದು ಬೆಳಿಗ್ಗೆ 11 ಗಂಟೆಗೆ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ದಲಿತರ ಮುಂದಿರುವ ಸವಾಲುಗಳು ವಿಷಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸುವರು.ಮೈಸೂರು ಉರಲಿಂಗಪೆದ್ಧಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಅಣದೂರ ಬುದ್ಧವಿಹಾರದ ಪೂಜ್ಯ ವರಜ್ಯೋತಿ ಭಂತೇಜಿ ಅವರು ಸಾನಿಧ್ಯ ವಹಿಸುವರು.ಚಿಂತಕ ಮತ್ತು ಹಿರಿಯ ಪತ್ರಕರ್ತ ದಿನೇಶ ಅಮೀನ್ ಮಟ್ಟು ಅವರು ವಿಚಾರ ಮಂಡಿಸುವರು.ಸಚಿವರಾದ ಸತೀಶ ಜಾರಕಿಹೊಳಿ,ಎನ್.ಎಸ್ ಭೋಸರಾಜು,ವಿಧಾನ ಪರಿಷತ್ತು ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಸೇರಿದಂತೆ ಅನೇಕ ಗಣ್ಯರು,ದಲಿತ ಮುಖಂಡರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಬುರಗಿ ಜಿಲ್ಲೆಯಿಂದ ಸುಮಾರು 300 ಜನ ಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಿಲಿಂದ ಸನಗುಂದಿ,ರಮೇಶ ಚಿಮ್ಮಯಿದಲಾಯಿ,ಭೀಮರಾಯ ನಗನೂರ,ಶರಣು ಉಡಗಿ,ಭರತ್ ಬುಳ್ಳಾ ,ರವಿ ಕುಳಗೇರಿ,ಕಲ್ಯಾಣರಾವ ಘಾಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.