ಬೆಂಗಳೂರೀಗ ಗುಂಡಿಯೂರು ಎಚ್‌ಡಿಕೆ ವ್ಯಂಗ್ಯ

ಬೆಂಗಳೂರು ಸೆ.೧೮ ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರದ ಪ್ರತಿಷ್ಠೆಗೆ ಘೋರ ಪೆಟ್ಟು ಬಿದ್ದಿದೆ. ಬೆಂಗಳೂರು ಈಗ ಗುಂಡಿಯೂರು ಆಗಿ ಕುಖ್ಯಾತಿ ಆಗುತ್ತಿರುವುದು ದುರ್ದೈವ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ


ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರುಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರು ಈ ಅಪಮಾನಕ್ಕೆ ಹೊಣೆಗಾರರು. ಬೆಂಗಳೂರು ಮತ್ತು ಕರ್ನಾಟಕ ಇವತ್ತು ಅದಕ್ಷರು, ಭ್ರಷ್ಟರ ಕೈಯ್ಯಲ್ಲಿ ಸಿಕ್ಕಿ ನರಳುತ್ತಿವೆ. ಹೆಜ್ಜೆ ಹೆಜ್ಜೆಗೂ ಸಾವಿನ ಗುಂಡಿ. ಕಂಡೆಲ್ಲೆಲ್ಲ ಕಸದ ರಾಶಿ. ಗ್ರೇಟರ್ ಬೆಂಗಳೂರು ಎಂದರೆ ಇದೇನಾ ಜಿಬಿಎ ಏನು ಮಾಡುತ್ತಿದೆ ಜನರ ತೆರಿಗೆ ದುಡ್ಡು ನುಂಗಿ ಗೊರಕೆ ಹೊಡೆಯುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ


ಬೆಂಗಳೂರಿನಲ್ಲಿ ಆಡಳಿತದ ಘೋರ ವೈಫಲ್ಯವಾಗಿದೆ ಎಂದು ಉದ್ಯಮಿಗಳು ದೂರಿರುವುದು ಸರಿ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಉದ್ಯಮಿಗಳು ಸರಕಾರದ ವೈಫಲ್ಯವನ್ನು ಇಷ್ಟು ಕಠಿಣವಾಗಿ ಎತ್ತಿ ತೋರಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಈ ಸರಕಾರಕ್ಕೆ ಎಳ್ಳಷ್ಟೂ ಸಂಕೋಚ, ಆತ್ಮಾಭಿಮಾನವಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಗುಂಡಿಪಾಲು ಮಾಡಿದೆ ಎಂದು ಟೀಕಿಸಿದ್ದಾರೆ.


ತೆರಿಗೆ ಹಾಕುವುದರಲ್ಲಿ ಸರಕಾರದ್ದು ರಾಕೆಟ್ ವೇಗ. ಗುಂಡಿ ಮುಚ್ಚುವುದರಲ್ಲಿ ಕೊನೇಪಕ್ಷ ಆಮೆ ವೇಗವೂ ಇಲ್ಲ. ಕೊಳ್ಳೆ ಹೊಡೆಯುವುದರಲ್ಲಿ ಇರುವ ಉನ್ಮಾದ, ಅಭಿವೃದ್ಧಿಯತ್ತ ವಿಪರೀತ ಉಪೇಕ್ಷೆ. ಚುನಾವಣಾ ಗ್ಯಾರಂಟಿಗಳಿಗೆ ರಾಜ್ಯದ ಅಭಿವೃದ್ಧಿ ಬಲಿಯಾಗಿ ಗ್ರೇಟರ್ ಬೆಂಗಳೂರು ಗಬ್ಬೆದ್ದು ನಾರುತ್ತಿದೆ! ಎಂದು ಕಿಡಿ ಕಾರಿದ್ದಾರೆ
ಗುಂಡಿ ಮುಚ್ಚುವುದಕ್ಕೆ ಬಿಡಿಗಾಸಿಲ್ಲದ ಸರಕಾರ ಜನರಿಂದ ಕಿತ್ತುಕೊಳ್ಳುತ್ತಿರುವ ತೆರಿಗೆ ಹಣ ಏನು ಮಾಡುತ್ತಿದೆ ಅದು ಯಾರ ಕಿಸೆ ಸೇರುತ್ತಿದೆ ಇದಕ್ಕೆ ಉತ್ತರ ಬೇಕು.
ಕಂಪನಿಗಳು ರಾಜ್ಯ ಸರಕಾರದ ಮೇಲೆ ಭರವಸೆ ಕಳೆದುಕೊಂಡು ನೆರೆರಾಜ್ಯಗಳತ್ತ ವಲಸೆ ಹೋಗುತ್ತಿವೆ. ಆ ರಾಜ್ಯಗಳು ಇಂಥ ಸಮಯಕ್ಕೇ ಕಾಯುತ್ತಾ ರಿಯಾಯ್ತಿ ಮೇಲೆ ರಿಯಾಯ್ತಿಗಳನ್ನು ನೀಡುತ್ತಿವೆ. ಭಂಡ ಸರಕಾರಕ್ಕೆ ಅರ್ಥವಾಗುತ್ತಿಲ್ಲ. ಈ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ. ಎಂದಿದ್ದಾರೆ


ನೀವು ಬೆಂಗಳೂರು ಬಿಡುವುದು ಬೇಡ. ಈ ನಗರಕ್ಕೆ ಮಹಾನ್ ಪರಂಪರೆ, ಹಿನ್ನೆಲೆ ಇದೆ. ಈ ಎಮ್ಮೆ ಚರ್ಮದ ಸರಕಾರಕ್ಕೆ ಪಾಠ ಕಲಿಸುತ್ತೇವೆ. ನಿಮ್ಮ ಜತೆ ನಾವು, ಇಡೀ ಕರ್ನಾಟಕದ ಜನತೆ ಇದ್ದೇವೆ. ಹೋಗುತ್ತೇವೆ ಎನ್ನುವ ಮಾತನ್ನು ಮನಸ್ಸಿನಿಂದ ತೆಗೆದುಬಿಡಿ. ನಾವೆಲ್ಲರೂ ಸೇರಿ ಬೆಂಗಳೂರು ನಗರವನ್ನು ಬದಲಿಸೋಣ. ಎಂದು ಕುಮಾರಸ್ವಾಮಿ ಕರೆ ನೀಡಿದ್ದಾರೆ