
ಕೋಲಾರ, ಫೆ.೧೭-ಜೇನು ಸಾಕಾಣಿಕೆಯು ಕೂಡ ಲಾಭಾದಾಯಕ ಉಪ ಕಸುಬಾಗಿದ್ದು, ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ ಹೊಂಗಲ ಹೇಳಿದರು.
ನಗರ ಹೊರವಲಯದ ಟಮಕ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೆಹಗಲ್ ಫೌಂಡೇಶನ್ ವತಿಯಿಂದ ರೈತರಿಗಾಗಿ ಹಮ್ಮಿಕೊಂಡಿದ್ದ ಜೇನುಕೃಷಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಜೊತೆ ಜೊತೆಗೆ ಜೇನು ಸಾಕಾಣಿಕೆ ಮಾಡುವುದು ಅವರ ಆರ್ಥಿಕ ಸದೃಢತೆ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಹಾಗೂ ಸಾವಯವ ಪದ್ದತಿಯಲ್ಲಿ ಸಾಕಾಣಿಕೆ ಮಾಡುವ ಜೇನಿನ ತುಪ್ಪಕ್ಕೆ ಭಾರಿ ಬೇಡಿಕೆಯಿದ್ದು, ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದನ್ನು ಕಲಿತು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವವರು ಜೀವನದಲ್ಲಿ ಮುನ್ನಡೆಯುತ್ತಾರೆ ಎಂದು ತಿಳಿಸಿದರು.
ತೋಟಗಾರಿಕೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಗಂಗಾಧರ್ ಮಾತನಾಡಿ, ಜೇನು ನೊಣಗಳ ವೈಜ್ಞಾನಿಕ ನಿರ್ವಹಣೆ, ರಾಣಿ ಜೇನಿನ ಮಹತ್ವ ಮತ್ತು ಜೇನು ನೊಣಗಳ ಪರಾಗಸ್ಪರ್ಶ ಕ್ರಿಯೆ ಬಗ್ಗೆ ಅರಿವು ಮೂಡಿಸಿದರು.
ತಪೋವನ ಮಧುಕೇಂದ್ರದ ಮುಖ್ಯಸ್ಥ ಸಂತೋಷ್ ಜೇನು ಸಾಕಾಣಿಕೆ ಬಗ್ಗೆ ಪ್ರಾಯೋಗಿಕ ಪ್ರದರ್ಶನದ ಮೂಲಕ ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸೆಹಗಲ್ ಫೌಂಡೇಶನ್ ಅಧಿಕಾರಿ ಶಿವಶರಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



























