ಎಚ್ಚರಿಕೆ ವಹಿಸಿ ವಿದ್ಯುತ್ ಅವಘಡ ತಪ್ಪಿಸಿ

ಕೋಲಾರ,ಡಿ,೨೭- ವಿದ್ಯುತ್ ಅವಘಡದಿಂದ ಆಗುವ ಪ್ರಾಣ ಹಾನಿ ತಪ್ಪಿಸಲು ಮುಂಜಾಗ್ರತೆ ಮತ್ತು ವಿನಾಕಾರಣ ವಿದ್ಯುತ್ ಪೋಲಾಗುವುದನ್ನು ತಪ್ಪಿಸಲು ಜಾಗೃತಿವಹಿಸಿ ಪೋಷಕರಿಗೂ ಈ ಕುರಿತು ಅರಿವು ಮೂಡಿಸಿ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಬಿ.ಎನ್.ಶುಭಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ನಗರದ ಕಠಾರಿಪಾಳ್ಯದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ (ಬೆಸ್ಕಾಂ) ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ವಿದ್ಯುತ್ ಶಕ್ತಿಯ ಸುರಕ್ಷತೆ ಮತ್ತು ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ಸಂಬಂಧ ಅರಿವು ಮೂಡಿಸಲು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ವಿದ್ಯುತ್ ಇಂದು ಅತಿ ಜೀವನಾ ವಶ್ಯಕವಾದ ಶಕ್ತಿಯ ಮೂಲವಾಗಿದೆ, ಕತ್ತಲು ಓಡಿಸಲು, ಅಡುಗೆ, ಬಿಸಿನೀರು, ಕೈಗಾರಿಕೆಗಳು ಸೇರಿದಂತೆ ಪ್ರತಿ ವಲಯದಲ್ಲೂ ವಿದ್ಯುತ್ ಅಗತ್ಯವಿದೆ, ವಿದ್ಯುತ್ ಶಕ್ತಿಯಿಲ್ಲದ ಜೀವನ ನೆನಪಿಸಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿಗೆ ಜನತೆ ಹೊಂದಿಕೊಂಡಿದ್ದಾರೆ ಎಂದರು.


ಈ ನಡುವೆ ವಿದ್ಯುತ್ ಬಳಕೆಯಲ್ಲಿನ ವ್ಯತ್ಯಾಸ, ಮುಂಜಾಗ್ರತೆ ವಹಿಸದಿರುವುದು, ನಿಯಮ ಬಾಹಿರ ಸಂಪರ್ಕ ಪಡೆಯುವುದು ಮತ್ತಿತರ ಕಾರಣಗಳಿಂದ ವಿದ್ಯುತ್ ಅವಘಡಗಳಾಗಿ ಸಾವು ನೋವುಗಳಾಗುವುದನ್ನು ಕಂಡಿದ್ದೇವೆ,,,, ಕೇಳಿದ್ದೇವೆ,,,, ಇಂತಹ ಘಟನೆಗಳನ್ನು ತಡೆದು, ವಿದ್ಯುತ್ ಅನ್ನು ಜೀವನ ಸ್ನೇಹಿಯಾಗಿ ಬಳಸಿಕೊಳ್ಳಲು ಮುಂಜಾಗ್ರತೆ ಅಗತ್ಯ ಎಂದರು.


ಸಹಾಯಕ ನಿರ್ವಾಹಕ ಇಂಜಿನಿಯರ್ ಸಿ.ಬಸವರಾಜ್ ಮಾತನಾಡಿ, ಪವರ್ ಮ್ಯಾನ್‌ಗಳ ಸುರಕ್ಷತೆಗೆ ಅನುಗುಣವಾಗಿ ವಿದ್ಯುತ್ ಮಾರ್ಗಗಳು, ವಿದ್ಯುತ್ ಪರಿವರ್ತಕಗಳು, ವಿದ್ಯುತ್ ಉಪಸ್ಥಾವರಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಎಲ್ಲ ವಿದ್ಯುತ್ ಸ್ಥಾವರಗಳಲ್ಲೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ನಮ್ಮ ಜೀವದ ಜೊತೆಗೆ ನಮ್ಮ ಕುಟುಂಬವು ನಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಕೆಲಸದ ವೇಳೆ ಜೀವ ರಕ್ಷಕ ವಸ್ತುಗಳನ್ನು ಬಳಸುವಂತೆ ತಿಳಿಸಿದ ಅವರು, ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು.


ಸಹಾಯಕ ನಿರ್ವಾಹಕ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ವಿದ್ಯುತ್ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಪ್ರಬಂಧ, ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಂಡು ಅರಿವು ನೀಡಲಾಗುತ್ತಿದೆ ಎಂದು ತಿಳಿಸಿ, ವಿದ್ಯಾರ್ಥಿಗಳು ವಿದ್ಯುತ್ ಅವಘಡಗಳಿಂದ ಪಾರಾಗುವ ಕುರಿತು ಅರಿವು ಪಡೆಯಿರಿ ಎಂದರು.


ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ ಹಾಜರಿದ್ದು, ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಕೋರಿದರು. ಪ್ರಥಮ ಬಹುಮಾನ ೩ ಸಾವಿರ, ದ್ವಿತೀಯ ಬಹುಮಾನ ೨ ಸಾವಿರ ಹಾಗೂ ತೃತೀಯ ಬಹುಮಾನ ೧ ಸಾವಿರ ರೂಗಳನ್ನು ತಾಲ್ಲೂಕುವಾರ ಪ್ರತಿ ಸ್ಪರ್ಧೆ ಹಾಗೂ ಪ್ರತಿ ವರ್ಗಕ್ಕೂ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪರ್ಧೆ- ಪ್ರೌಢಶಾಲಾ ವಿಭಾಗದಿಂದ ಹೋಳೂರು ಸರ್ಕಾರಿ ಪ್ರೌಢಶಾಲೆಯ ಎಸ್.ಸಿಂಜನ ಪ್ರಥಮ, ಸೂಲೂರು ಸರ್ಕಾರಿ ಪ್ರೌಢಶಾಲೆಯ ಆರ್.ದೀಪಕ್ ದ್ವಿತೀಯ ಹಾಗೂ ಕೆಪಿಎಸ್ ನರಸಾಪುರದ ಎಂ.ವರ್ಷಿಣಿ ತೃತೀಯ ಸ್ಥಾನ ಪಡೆದುಕೊಂಡರು.


ಪ್ರಾಥಮಿಕ ವಿಭಾಗದಲ್ಲಿ ಕೆಪಿಎಸ್ ನರಸಾಪುರದ ತೇಜಸ್ ಪ್ರಥಮ, ಬಿ.ಕೆ.ಗೌತಮಿ ದ್ವಿತೀಯ, ಶಾಪೂರು ಶಾಲೆಯ ಎಲ್.ಎನ್.ಮಧುಪ್ರಿಯ ತೃತೀಯ ಸ್ಥಾನ ಪಡೆದರು.
ಭಾಷಣ ಸ್ಪರ್ಧೆ-ಪ್ರೌಢಶಾಲಾ ವಿಭಾಗದಲ್ಲಿ ಮುದುವಾಡಿ ಸರ್ಕಾರಿ ಪ್ರೌಢಶಾಲೆಯ ಷಾಜಿಯಾ ಪ್ರಥಮ, ಕೆಪಿಎಸ್ ನರಸಾಪುರದ ಕೀರ್ತನಾ ದ್ವಿತೀಯ ಮದನಹಳ್ಳಿ ಮೋರಾರ್ಜಿ ಶಾಲೆಯ ಲಕ್ಷ್ಮೀ ತೃತೀಯ ಸ್ಥಾನ ಪಡೆದರು.ಪ್ರಾಥಮಿಕ ವಿಭಾಗದಲ್ಲಿ ಮದನಹಳ್ಳಿ ಮೊರಾರ್ಜಿಶಾಲೆಯ ದೀಕ್ಷಾ ಪ್ರಥಮ, ಕೆಪಿಎಸ್ ನರಸಾಪುರದ ವಿಷ್ಣುವರ್ಧನ್ ದ್ವಿತೀಯ ಹಗೂ ಸುಗಟೂರುಸರ್ಕಾರಿ ಶಾಲೆಯ ಭಾವನ ತೃತೀಯ ಸ್ಥಾನ ಪಡೆದರು.


ಕಾರ್ಯಕ್ರಮದಲ್ಲಿ ಇಸಿಒಗಳಾದ ನಂಜುಂಡಗೌಡ, ಎಂ.ಎನ್.ರಾಧಾ, ಕೆ.ಶ್ರೀನಿವಾಸ್, ಸಿಆರ್‌ಪಿ ಕೆ.ಸಿ.ಮಂಜುನಾಥ್ ಸೇರಿದಂತೆ ಬೆಸ್ಕಾಂ ಎಲ್ಲಾ ಶಾಖಾಧಿಕಾರಿಗಳು ಹಾಜರಿದ್ದರು.