ರಾಮನಗರ.ಆ೨೪:ಕೃಷಿಯನ್ನು ನಂಬಿ ಜೀವನ ಮಾಡುತ್ತಿರುವ ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ನೆರವು ನೀಡಲು ಬಿಡಿಸಿಸಿ ಬ್ಯಾಂಕ್ ಮುಂದಾಗಬೇಕು ಎಂದು ನಾನು ಈ ಹಿಂದೆ ಒತ್ತಾಯಿಸಿದ್ದೆ. ಇದೀಗ ಬಿಡಿಸಿಸಿ ಬ್ಯಾಂಕ್ ವತಿಯಿಂದ ತಾಲೂಕಿಗೆ ೪೦ ಕೋಟಿ ರೂ. ಸಾಲ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಹೆಚ್. ಎ.ಇಕ್ಬಾಲ್‌ಹುಸೇನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಬಿಡಿಸಿಸಿ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಹಕರ ದಿನಾಚರಣೆ ಹಾಗೂ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಯಾಂಕ್ ನಿಂದ ಸಾಲಸೌಲಭ್ಯ ಇಲ್ಲದೆ ರೈತರಿಗೆ ಸಮಸ್ಯೆಯಾಗುತಿತ್ತು. ಇದಕ್ಕಾಗಿ ಸಾಲ ಮಂಜೂರು ಮಾಡುವಂತೆ ನಾನು ಬಿಡಿಸಿಸಿ ಬ್ಯಾಂಕ್ ಆಡಳಿತ ವರ್ಗಕ್ಕೆ ಕೋರಿದ್ದೆ. ಕೆಲ ದಿನಗಳ ಹಿಂದೆ ಹಾರೊಹಳ್ಳಿ ತಾಲೂಕಿಗೆ ೨೫ ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿತ್ತು. ಇದೀಗ ರಾಮನಗರ ತಾಲೂಕಿಗೆ ೪೦ ಕೋಟಿ ರೂ. ಸಾಲಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು.
ರೈತರು ವಲಸೆ ಹೋಗಿ ಕೂಲಿ ಮಾಡುವುದನ್ನು ತಪ್ಪಿಸಬೇಕು. ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವು ನೀಡಬೇಕು. ಕಡಿಮೆ ಸಂಬಳಕ್ಕೆ ಹೊರಗೆ ದುಡಿಯುವುದನ್ನು ಬಿಡಬೇಕು. ಇದಕ್ಕಾಗಿ ಸಾಲಸೌಲಭ್ಯ ಅತ್ಯವಶ್ಯಕ. ರೈತರು ಎಲ್ಲೋ ಹೊರಗೆ ಹೋಗಿ ಕಡಿಮೆ ಬೆಲೆಗೆ ಸಾಲ ಮಾಡುವ ಬದಲು, ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಇಲ್ಲೇ ಸ್ವಾವಲಂಬಿ ಬದುಕು ಸಾಗಿಸಿ ಎಂದು ಸಲಹೆ ನೀಡಿದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ನೆರವು ನೀಡಲಾಗುತ್ತಿದೆ. ಆದರೆ, ಸ್ತ್ರೀಶಕ್ತಿ ಸಂಘವನ್ನು ಸ್ಥಾಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ, ನಮ್ಮ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದಾಗಲೆಲ್ಲಾ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಬಾರಿಯ ಸರ್ಕಾರ ೫ ಗ್ಯಾರಂಟಿಗಳನ್ನು ನೀಡಿದ್ದೇ ಸಾಕ್ಷಿ. ನಮಗೆ ಮತ ಹಾಕಿದವರಿಗಿಂತ ಮತಹಾಕದವರೇ ಇದೀಗ ಗ್ಯಾರಂಟಿ ಯೋಜನೆ ಹಣ ಬಂದಿಲ್ಲ ಎಂದು ಕೇಳುತ್ತಿದ್ದಾರೆ. ಆದರೆ ನಾವು ಪಕ್ಷಾತೀತವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ರೈತರು ಸಾಲ ಮನ್ನಾ ಆಗುತ್ತದೆ ಎನ್ನುವ ಮನೋಭಾವ ಬಿಟ್ಟು ಸಾಲವನ್ನು ತೀರಿಸಬೇಕು. ನೀವು ಸಾಲವನ್ನು ತೀರಿಸಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದುತ್ತವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚು ಸಹಕಾರ ನೀಡಲಾಗುವುದು ಎಂದರು.
ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್‌ದೇವ್ ಮಾತನಾಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರಹಳ್ಳಿ ಮಂಜು, ಅವರು ಮಾತನಾಡಿ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಹೊಸ ಕಾನೂನು ಮಾಡಿದ್ದು, ಸಹಕಾರ ಕ್ಷೇತ್ರದಲ್ಲಿ ಎಸ್‌ಸಿ ಮತ್ತು ಎಸ್‌ಟಿ ವರ್ಗದವರ ಸಬ್ಸಿಡಿ ಸಾಲವನ್ನು ಮನ್ನಾ ಮಾಡುವುದಕ್ಕೆ ಲಾಟರಿ ಯೋಜನೆಯನ್ನು ರದ್ದು ಮಾಡಿದ್ಧಾರೆ. ಕೇಂದ್ರದ ಜನವಿರೋಧಿ ನೀತಿಯನ್ನು ನಾಡಿನ ಜನತೆ ಖಂಡಿಸಬೇಕು. ರೈತರಿಗೆ ವಿತರಿಸುವ ಗೊಬ್ಬರ ಮತ್ತು ಯೂರಿಯಾವನ್ನು ಶೇಖರಿಸಲು ಗೋಡೌನ್ ಅವಶ್ಯಕತೆ ಇದ್ದು, ಸರ್ಕಾರ ಸ್ಥಳವನ್ನು ನೀಡಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.
ಇದೇ ವೇಳೆ ವಿವಿಧ ಸಂಘಗಳಿಗೆ ಬೆಳೆ ಸಾಲ, ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ಗಳನ್ನು ವಿತರಿಸಲಾಯಿತು, ಬ್ಯಾಂಕಿನಲ್ಲಿ ವಾರ್ಷಿಕ ವಹಿವಾಟು ನಡೆಸಿದವರಿಗೆ ಉತ್ತಮ ಗ್ರಾಹಕ ಪ್ರಶಸ್ತಿ ನೀಡಲಾಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ರವಿ, ಮಾಜಿ ಶಾಸಕರಾದ ಸಿಎಂ. ಲಿಂಗಪ್ಪ, ಕೆ.ರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೃಷ್ಣಮೂರ್ತಿ, ಗ್ರೇಟರ್ ಬೆಂಗಳೂರು ಅಧ್ಯಕ್ಷ ನಟರಾಜು, ನಗರಸಭಾ ಅಧ್ಯಕ್ಷ ಕೆ.ಶೇಷಾದ್ರಿ, ಪ್ರಾಧಿಕಾರದ ಅಧ್ಯಕ್ಷ ಚೇತನ್ ಕುಮಾರ್, ಬಮೂಲ್ ನಿರ್ದೇಶಕರಾದ ಲಿಂಗೇಶ್ ಕುಮಾರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಹೆಚ್.ರಾಜು, ಮುಖಂಡರಾದ ಎಂ.ಕೆ.ಧನಂಜಯ, ಸಿ.ಎನ್.ಆರ್. ವೆಂಕಟೇಶ್, ಕೆ.ರಮೇಶ್, ರಾಜಣ್ಣ,ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪುಂಡಲೀಕ್, ಸೇರಿದಂತೆ ತಾಲ್ಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು ವೇದಿಕೆಯಲ್ಲಿ ಇದ್ದರು..




























