ಗಾಂಧಿನಗರ ಬಸವೇಶ್ವರ ಮಂದಿರದಲ್ಲಿ ಬಸವೇಶ್ವರ ತೊಟ್ಟಿಲು ಕಾರ್ಯಕ್ರಮ

ಬೀದರ್: ಅ.1:ಶ್ರಾವಣ ಶುದ್ಧ ಪಂಚಮಿಯಂದು ಬಸವೇಶ್ವರರು ಲಿಂಗೈಕ್ಯರಾಗುತ್ತಾರೆ. ಅಂದಿನಿಂದ ಬಸವ ಪಂಚಮಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಬಡವರಿಗೆ, ರೋಗಿಗಳಿಗೆ ಹಾಗೂ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಹಾಲು ಹಣ್ಣು ವಿತರಿಸಲಾಗುತ್ತದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ನುಡಿದರು.
ರಾಷ್ಟ್ರೀಯ ಬಸವ ದಳ, ಬಸವೇಶ್ವರ ಮಂದಿರ ಅಭಿವೃದ್ಧಿ ಮಂಡಳಿ ಗಾಂಧಿನಗರ, ವಿಶ್ವಧರ್ಮ ಪ್ರವಚನ ಸಮಿತಿ ವತಿಯಿಂದ ಮಂದಿರದ ಆವರಣದಲ್ಲಿ ಆಯೋಜಿಸಿದ ಬಸವ ಪಂಚಮಿ, ನೀಲಗಂಗಮ್ಮ ತಾಯಿ ಸ್ಮರಣೆ ಹಾಗೂ ಬಸವ ತೊಟ್ಟಿಲೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಬಸವಾದಿ ಶರಣರ ವಚನಗಳನ್ನು ಪ್ರತಿಯೊಬ್ಬರೂ ಪ್ರತಿದಿನ ಪಠಣ ಮಾಡಬೇಕು. ಅವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಬಸವ ತತ್ವ ಪ್ರಚಾರಕರಾದ ಸಿದ್ರಾಮಪ್ಪ ಕಪಲಾಪುರೆ ಮಾತನಾಡಿ ಪೂಜ್ಯ ಚನ್ನಬಸವಾನಂದ ಸ್ವಾಮೀಜಿಯವರು ಆ. 27ರ ವರೆಗೆ ಪ್ರವಚನ ಉಣಬಡಿಸಲಿದ್ದಾರೆ. ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇದೇ ವೇಳೆ ಬೀದರ ವಿ.ವಿ. ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ, ಪ್ರಮುಖರಾದ ಕಮಲಾಕರ ಪಾಟೀಲ, ವಿಶ್ವನಾಥ ಪಾಟೀಲ, ನಾಗೇಂದ್ರ ಪಾಟೀಲ ಸೇರಿದಂತೆ ಕಾಲೋನಿಯ ಮಹಿಳೆಯರು ಉಪಸ್ಥಿತರಿದ್ದರು.