Home ಜಿಲ್ಲೆ ಲಿಂಗಾಯತ ಗಣಮೇಳ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬಸವರಾಜ ಬುಳ್ಳಾ ಆಯ್ಕೆ

ಲಿಂಗಾಯತ ಗಣಮೇಳ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬಸವರಾಜ ಬುಳ್ಳಾ ಆಯ್ಕೆ

ಬೀದರ್:ಮಾ.೧೦: ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಅಲ್ಲಮಗಿರಿ ಪ್ರದೇಶದಲ್ಲಿ ಮಾರ್ಚ್ ೨೧ ಮತ್ತು ೨೨, ೨೦೨೬ ರಂದು ನಡೆಯಲಿರುವ ೨೧ನೇ ಲಿಂಗಾಯತ ಗಣಮೇಳ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಕಚೇರಿ ಬೆಂಗಳೂರು ಉಪಾಧ್ಯಕ್ಷರಾದ ಶ್ರೀ ಬಸವರಾಜ ಬುಳ್ಳಾ ಅವರನ್ನು ಆಯ್ಕೆ ಮಾಡಲಾಗಿದೆ.
ಪೂಜ್ಯ ಶ್ರೀನಿರಂಜನ ಮಹಾಜಗದ್ಗುರು ಡಾ. ಗಂಗಾದೇವಿ ಮಾತಾಜಿ ಅವರ ಆದೇಶದ ಮೇರೆಗೆ ಬಸವ ಧರ್ಮಪೀಠ ಕೂಡಲಸಂಗಮ, ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಲಿಂಗಾಯತ ಪರ ಸಂಘಟನೆಗಳು ಹಾಗೂ ಲಿಂಗಾಯತ ಗಣಮೇಳ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಈ ಗಣಮೇಳವನ್ನು ಆಯೋಜಿಸಲಾಗಿದೆ.
೧೨ನೇ ಶತಮಾನದಲ್ಲಿ ಮಹಾಮಾನವತಾವಾದಿ ವಿಶ್ವಗುರು ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪದ ಶೂನ್ಯಪೀಠದ ಪ್ರಥಮ ಪೀಠಾಧ್ಯಕ್ಷರಾದ ಯೋಗಮಹಾಯೋಗಿ ಅಲ್ಲಮಪ್ರಭು ದೇವರು ಅಲ್ಲಮಗಿರಿಯಲ್ಲಿ ಜ್ಯೋತಿ ಪ್ರಜ್ವಲಿಸಿದ ಪವಿತ್ರ ಕ್ಷೇತ್ರದಲ್ಲಿ ಈ ಗಣಮೇಳ ನಡೆಯುತ್ತಿರುವುದು ವಿಶೇಷವಾಗಿದೆ. ಇಂದಿಗೂ ಆ ಜ್ಯೋತಿ ಪ್ರಜ್ವಲಿಸುತ್ತಿದ್ದು, ಈ ಕ್ಷೇತ್ರ ಲಿಂಗಾಯತ ಧರ್ಮದ ಪ್ರಸಾರ ಹಾಗೂ ವಚನ ಪರಂಪರೆಯ ಸಾಮಾಜಿಕ ಐಕ್ಯತೆಯ ಸಂದೇಶವನ್ನು ಸಾರುವ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ.
ಈ ಹಿನ್ನೆಲೆಯಲ್ಲಿ ನಡೆಯಲಿರುವ ಗಣಮೇಳಕ್ಕೆ ಬಸವರಾಜ ಬುಳ್ಳಾ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅವರ ಅಧ್ಯಕ್ಷತೆಯಿಂದ ಗಣಮೇಳಕ್ಕೆ ಇನ್ನಷ್ಟು ಗೌರವ ಮತ್ತು ಶೋಭೆ ಹೆಚ್ಚಲಿದೆ ಎಂದು ಆಯೋಜಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.