ಕಲಬುರಗಿ:ಭಕ್ತಿ ಭಂಡಾರಿ ಬಸವಣ್ಣನವರು ವ್ಯಕ್ತಿಗೌರವಕ್ಕೆ ಹೆಚ್ಚಿನ ಮಹತ್ವ ನೀಡಿ ಶ್ರೇಷ್ಠತೆಯನ್ನು ಮೆರೆದಿದ್ದರು ಎಂದು ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಪ್ರಾಧ್ಯಾಪಕ ಡಾ.ಚಂದ್ರಕಾಂತ ಪಾಟೀಲ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣನವರು ಮತ್ತು ವ್ಯಕ್ತಿಗೌರವ ಎಂಬ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರು ಅವರು ಜಾತಿ, ಮತ, ಲಿಂಗ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಸಾರಿದರು. ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಾಯಕದಲ್ಲಿ ನಿಷ್ಠನಾಗಿರಬೇಕು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ದಾಸೋಹವನ್ನು ಪ್ರೋತ್ಸಾಹಿಸಿದರು, ಅಂದರೆ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವುದು ಮತ್ತು ಅವರ ಕಷ್ಟಗಳನ್ನು ನಿವಾರಿಸುವುದು.
ಬಸವಣ್ಣನವರು ವ್ಯಕ್ತಿಗೌರವವನ್ನು ಎತ್ತಿಹಿಡಿಯಲು ಹಲವಾರು ತತ್ವಗಳನ್ನು ನೀಡಿದ್ದಾರೆ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಕಾಯಕದಲ್ಲಿ ನಿಷ್ಠನಾಗಿರಬೇಕು ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದು ವ್ಯಕ್ತಿಯ ಆತ್ಮಗೌರವವನ್ನು ಹೆಚ್ಚಿಸುತ್ತದೆ ಮತ್ತು ಸಮಾಜದಲ್ಲಿ ಗೌರವವನ್ನು ತರುತ್ತದೆ.
ದಯೆ, ಕರುಣೆ ಮತ್ತು ಸಹಾನುಭೂತಿ ವ್ಯಕ್ತಿಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುತ್ತದೆ.
ಜಾತಿ, ಮತ, ಲಿಂಗ ಭೇದವಿಲ್ಲದೆ ಸಮಾನತೆ ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಗೌರವ ಸಿಗಬೇಕು. ಹಿಂಸೆಯನ್ನು ವಿರೋಧಿಸಿ ಮತ್ತು ಅಹಿಂಸೆಯನ್ನು ಪಾಲಿಸಬೇಕು. ಅನುಭವ ಮಂಟಪದ ಮೂಲಕ ಅರಿವು, ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಕಲ್ಪಿಸಿದರು. ಶಿವಶರಣರಿಗೆ ಶರಣು ಶರಣಾರ್ಥಿ ಎಂದು ಹೇಳುತ್ತಿದ್ದರು. ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಗೌರವಿಸುತ್ತಿದ್ದರು. ಅಂದಿನ ಎಲ್ಲ ಶರಣರು ಬಸವಣ್ಣನವರ ತೋರಿಸಿದ ದಾರಿಯಲ್ಲಿ ನಡೆಯುತ್ತಿದ್ದರು. ಅವರು ತೋರಿಸಿದ ದಾರಿಯಂತೆ ಇಂದಿನ ಪೀಳಿಗೆ ವ್ಯಕ್ತಿಗೌರವ ಕೊಡುವುದು ಕಡಿಮೆಯಾಗಿದೆ. ಅದಕ್ಕಾಗಿ ಇಂದಿನ ಪೀಳಿಗೆಗೆ ಹಿರಿಯರನ್ನು ಗೌರವಿಸುವುದು ಕಲಿಸಬೇಕಾಗಿದೆ ಎಂದು ಹೇಳಿದರು.

























