
ಬೀದರ್:(ಮಾದಾರ ಚೆನ್ನಯ್ಯ ವೇದಿಕೆ): ಡಿ.1:’ಯಾರು ಏನೇ ವಾದಿಸಿದರೂ ಬಸವಣ್ಣನವರ ಅನುಭವ ಮಂಟಪವೇ ಪ್ರಜಾಪ್ರಭುತ್ವದ ತಳಹದಿಯ ಪ್ರಥಮ ಸಂಸತ್ತು ಆಗಿತ್ತು’ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಹೇಳಿದರು.
ಬಸವಕಲ್ಯಾಣ ನಗರದ ಅನುಭವ ಮಂಟಪದಲ್ಲಿ ಶನಿವಾರ ವಿಶ್ವಬಸವಧರ್ಮ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಅನುಭವ ಮಂಟಪದಲ್ಲಿ ಎಲ್ಲ ಜಾತಿಯವರೂ ಇದ್ದರು. ಅಂತರಂಗ ಶುದ್ಧವಿದ್ದರೆ ಗುಡಿಗಳಿಗೆ ಸುತ್ತಬೇಕಾಗಿಲ್ಲ. ಬಸವತತ್ವದ ಪಾಲನೆಯಿಂದ ಸರ್ವರಿಗೂ ಒಳಿತಾಗಬಲ್ಲ ಕಲ್ಯಾಣ ರಾಜ್ಯ ನಿರ್ಮಾಣ ಆಗಬಲ್ಲದು. ವಿಶ್ವ ಬಸವಧರ್ಮ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಶರಣತತ್ವ ಪ್ರಸಾರಕ್ಕೆ ಅವಿರತವಾಗಿ ಶ್ರಮಿಸುತ್ತಿರುವುದು ಉತ್ತಮ ಕೆಲಸ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, `?700 ಕೋಟಿ ವೆಚ್ಚದ ಅನುಭವ ಮಂಟಪ ಕಾಮಗಾರಿ 2026ರ ಅಂತ್ಯದೊಳಗೆ ಉದ್ಘಾಟನೆ ಆಗಲಿದೆ’ ಎಂದರು. ಶಾಸಕ ಶರಣು ಸಲಗರ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿದರು.

























