ಬಸವರಾಜ ಧನ್ನೂರಗೆ ಬಸವ ಪುರಸ್ಕಾರ ಪ್ರದಾನ

ಬೀದರ್: ಅ.10:ಖ್ಯಾತ ಉದ್ಯಮಿಯೂ ಆದ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಅವರಿಗೆ ಬೆಂಗಳೂರಿನ ಬಸವ ಪರಿಷತ್ ವತಿಯಿಂದ ಕೊಡಲಾಗುವ 2025ನೇ ಸಾಲಿನ ಬಸವ ಪುರಸ್ಕಾರ ಬೆಂಗಳೂರಿನಲ್ಲಿ ಶನಿವಾರ ಪ್ರದಾನ ಮಾಡಲಾಯಿತು.
ಅರಮನೆ ರಸ್ತೆಯಲ್ಲಿ ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಗಣನೀಯ ಕೊಡುಗೆಗಾಗಿ ಅವರಿಗೆ ಪ್ರಶಸ್ತಿ ಸಂದಿದೆ. ಈ ಸಾಲಿನ ಬಸವ ಪುರಸ್ಕಾರಕ್ಕೆ ಆಯ್ಕೆಯಾದವರಲ್ಲಿ ಬಸವರಾಜ ಧನ್ನೂರ ಸೇರಿ ವಿವಿಧ ಕ್ಷೇತ್ರಗಳ 15 ಸಾಧಕರು ಸೇರಿದ್ದಾರೆ.
ಉದ್ಯಮ ಹಾಗೂ ಸಮಾಜ ಸೇವೆಯನ್ನು ಒಟ್ಟಿಗೆ ನಿರ್ವಹಿಸಿಕೊಂಡು ಹೋಗುತ್ತಿರುವ ಬಸವರಾಜ ಧನ್ನೂರ ಅಪ್ಪಟ ಬಸವಾನುಯಾಯಿ ಆಗಿದ್ದಾರೆ. ಕಾಯಕದ ಜತೆಗೆ ದಾಸೋಹಕ್ಕೂ ಪ್ರಾಮುಖ್ಯ ನೀಡಿದ್ದಾರೆ. ಸಮಾಜೋಧಾರ್ಮಿಕ ಕಾರ್ಯಗಳಿಗೆ ಉದಾರ ದೇಣಿಗೆ ಕೊಡುತ್ತಾ ಬಂದಿದ್ದಾರೆ. ಅನೇಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ. ಬಸವ ಕಾಯಕ, ದಾಸೋಹ ಫೌಂಡೇಷನ್ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.
ಜಿಲ್ಲೆಯ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಅವರು ಎರಡನೇ ಅವಧಿಗೆ ಬೀದರನ ಗಾಂಧಿಗಂಜನ ದಿ ಗ್ರೇನ್ ಆಯಿಂಡ್ ಸೀಡ್ಸ್ ಮಚರ್ಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ.
ಬೀದರ್ ದಾಲ್ ಮಿಲ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ, ಬಸವ ಕಾಯಕ, ದಾಸೋಹ ಫೌಂಡೇಷನ್ ಅಧ್ಯಕ್ಷ, ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಪಬ್ಲಿಕ್ ಇಮೇಜ್ ಅಧ್ಯಕ್ಷ ಸೇರಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಸಂಘ- ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಎಸ್. ಕಿರಣಕುಮಾರ, ಮಾಜಿ ಸಚಿವರಾದ ಉಮಾಶ್ರೀ, ಎಸ್.ಆರ್. ಪಾಟೀಲ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮತ್ತಿತರರು ಇದ್ದರು.