
ಕಲಬುರಗಿ:ಮೇ.22: ಹೆಚ್ಚು ಜ್ಞಾನಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡ ನಮ್ಮ ಕನ್ನಡ ಸಾಹಿತ್ಯ, ಭಾಷೆ ಜಗತ್ತಿನ ಹಿರಿಯ ಮತ್ತು ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಕನ್ನಡದ ಮೇರು ಲೇಖಕಿ, ಸಾಹಿತಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಕಥಾ ಸಂಕಲನ ಮತ್ತು ಇದರ ಅನುವಾದಕಿಯರಾದ ದೀಪಾ ಭಾಸ್ತಿ ಅವರಿಗೆ ವಿಶ್ವದ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡ ನಾಡಿ, ಕನ್ನಡಿಗರಿಗೆ ದೊರೆತ ಗೌರವವಾಗಿದ್ದು, ತನ್ಮೂಲಕ ಕನ್ನಡದ ಕಂಪು ವಿಶ್ವ ಮಟ್ಟದಲ್ಲಿ ಪಸರಿಸಿದ್ದಾರೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮುಕ್ತ ಕಂಠದಿಂದ ಶ್ಲಾಘಿಸಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಬುಕರ್ ಪ್ರಶಸ್ತಿ ಪುರಷ್ಕøತ ಸಾಹಿತಿ, ಲೇಖಕಿ ಬಾನು ಮುಷ್ತ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಅಭಿನಂದನೆ ಮತ್ತು ಸಿಹಿ ಹಂಚಿ ಸಂಭ್ರಮಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಬಾನು ಮುಷ್ತಾಕ್ ಅವರು ತಮ್ಮ ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ಮೆಟ್ಟಿ ನಿಂತು, ಅಂತಾರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡಿರುವುದು ಸಾಮಾನ್ಯವಲ್ಲ. ಇವರು ಸಮಸ್ತ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ. ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂಬುದಕ್ಕೆ ಬಾನು ಮುಷ್ತಾಕ್, ದೀಪಾ ಭಾಸ್ತಿಯವರ ಅದ್ವಿತೀಯ ಸಾಧನೆಯೇ ಸಾಕ್ಷಿಯಾಗಿದೆ. ಇದು ಕನ್ನಡ ನಾಡು ಮರೆಯಲಾರದ ಅವಿಸ್ಮರಣೀಯ ಸಂಗತಿಯಾಗಿದೆ ಎಂದು ಉಭಯ ಸಾಹಿತಿಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಓಂಕಾರ ವಠಾರ, ಶಿಕ್ಷಕಿಯರಾದ ಮುಸ್ಕಾನ್ ಶೇಖ್, ಪೂಜಾ ಹೂಗಾರ, ಪೃತ್ವಿ ಕೋರವಾರ, ನೇಹಾ, ಕಾವೇರಿ ಹೌದೆ, ನಿಲೊಫರ್ ಶೇಖ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.