
ಕಲಬುರಗಿ : ಜೂ.10:ಮಾಜಿ ಶಾಸಕ ದತ್ತಾತ್ರೇಯ ಸಿ. ಪಾಟೀಲ್ (ಅಪ್ಪುಗೌಡ ಪಾಟೀಲ್) ಅವರ ವಿರುದ್ಧ ದಾಖಲಾಗಿರುವ ಎಫ್‍ಐಆರ್ ಅನ್ನು ನಿಷ್ಪಕ್ಷಪಾತವಾಗಿ ಮರುಪರಿಶೀಲಿಸಿ ರದ್ದುಪಡಿಸಬೇಕು ಹಾಗೂ ಆಧಾರರಹಿತ ಆರೋಪಗಳನ್ನು ಹರಡುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘ (ಎಐಬಿಎಸ್‍ಎಸ್) ವತಿಯಿಂದ ಕಲಬುರಗಿ ನಗರ ಪೆÇಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ದತ್ತಾತ್ರೇಯ ಸಿ. ಪಾಟೀಲ್ ಅವರು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂಜಾರಾ ಸಮುದಾಯ ಸೇರಿದಂತೆ ವಿವಿಧ ವರ್ಗಗಳ ಅಭಿವೃದ್ಧಿಗೆ ಸೇವೆ ಸಲ್ಲಿಸಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ವಾಸ್ತವಾಂಶಗಳನ್ನು ಸಮಗ್ರವಾಗಿ ಪರಿಶೀಲಿಸದೆ ಯಾವುದೇ ತುರ್ತು ಕ್ರಮ ಕೈಗೊಳ್ಳುವುದು ಸಾರ್ವಜನಿಕರಲ್ಲಿ ತಪ್ಪು ಸಂದೇಶ ರವಾನಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಪ್ರಕರಣದ ತನಿಖೆಯನ್ನು ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಒತ್ತಡಗಳಿಂದ ಮುಕ್ತವಾಗಿ, ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಬೇಕು. ವಾಸ್ತವಾಂಶಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ಒದಗಿಸಬೇಕು ಎಂದು ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಇದೇ ವೇಳೆ, ಕೆಲ ವ್ಯಕ್ತಿಗಳು ಹಾಗೂ ಸಂಘಟನೆಗಳು ದತ್ತಾತ್ರೇಯ ಸಿ. ಪಾಟೀಲ್ ಅವರ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳು, ಸಾರ್ವಜನಿಕ ಸಭೆಗಳು ಹಾಗೂ ಇತರ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇದರಿಂದ ಅವರ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆಯಾಗುತ್ತಿದ್ದು, ಸಮಾಜದಲ್ಲಿ ವೈಮನಸ್ಸು ಮತ್ತು ಉದ್ವಿಗ್ನತೆ ಉಂಟುಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ, ಸುಳ್ಳು ಆರೋಪಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನುಬದ್ಧ ಕ್ರಮ ಜರುಗಿಸಿ, ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ನ್ಯಾಯ ಒದಗಿಸುವಂತೆ ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಪದಾಧಿಕಾರಿಗಳು ಪೆÇಲೀಸ್ ಆಯುಕ್ತರನ್ನು ಕೋರಿದ್ದಾರೆ. ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಸತ್ಯಾಂಶಗಳ ಆಧಾರದ ಮೇಲೆ ನ್ಯಾಯ ದೊರೆಯಲಿದೆ ಎಂಬ ನಂಬಿಕೆಯನ್ನು ಸಂಘ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಚಂದ್ರ ಜಾದವ್, ಆನಂದ್ ಕೆ. ಚವಾಣ್, ಮಹೇಶ್ ಹೀರಾ ನಾಯ್ಕ್ ಚವ್ಹಾಣ್, ಉಮೇಶ್ ಎಸ್. ಚವ್ಹಾಣ್, ಸಂತೋಷ್ ಅಡೆ,
ಆಕಾಶ್ ರಾಥೋಡ್, ವಿನೋದ್ ಚವಾಣ್, ಹಣಮಂತ ಚವ್ಹಾಣ್ (ಉದನೂರು), ಬಂದೇವ್ ಸಿಂಗ್ ರಾಥೋಡ್, ರಾಹುಲ್ ರಾಥೋಡ್ (ಬಿದ್ದಾಪುರ), ಅಪ್ಪಣ್ಣ ಪವಾರ್, ಕಾಂತು ಚೌಹಾಣ್, ದತ್ತು ಜಾದವ್, ಪಾಂಡು ರಾಥೋಡ್, ಹಿರಸಿಂಗ್ ರಾಥೋಡ್, ಹೇಮಂತ್ ರಾಥೋಡ್, ಉಮೇಶ್ ಜಾದವ್, ವಿಠ್ಠಲ್ ಉದ್ನೂರ, ರಾಹುಲ್ ರಾಠೋಡ್ ಸೇರಿದಂತೆ ಇತರರು ಇದ್ದರು.





























