
ಬಾದಾಮಿ,ಡಿ.೨೮: ಬರುವ ಜ.೩ ರಂದು ನಡೆಯಲಿರುವ ಉತ್ತರ ಕರ್ನಾಟಕದ ಪ್ರಸಿದ್ದ ಶ್ರೀ ಬನಶಂಕರಿ ದೇವಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಸ್ಥಳಕ್ಕೆ ಶನಿವಾರ ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಜಾತ್ರೆ ಸುಸುತ್ರವಾಗಿ ನಡೆಯಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲದಾರ ಕಾವ್ಯಶ್ರೀ ಎಚ್ , ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ ಮಾಕೊಂಡ, ಪೊಲೀಸ್ ವೃತ್ತ ನಿಕ್ಷಕ (ಸಿಪಿಐ) ಕರಿಯಪ್ಪ ಬನ್ನೆ, ಪಿ.ಎಸ್.ಐ. ಹನಮಂತ ನರಳೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ರಥೋತ್ಸವದ ಆಯೋಜನೆ, ಭದ್ರತೆ, ಸ್ವಚ್ಛತೆ, ಅಂಗಡಿಗಳ, ಪರವಾನಿಗೆ, ಮನರಂಜನೆ, ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿದರು. ಈ ಜಾತ್ರೆ ಒಂದು ತಿಂಗಳ ಕಾಲ ನಡೆಯಲಿದ್ದು, ವಿಶೇಷವಾಗಿ ಜಾನುವಾರಗಳ ಸಂತೆ, ನಾಟಕ ಕಂಪನಿಗಳು, ಚಲನಚಿತ್ರ ಪ್ರದರ್ಶನಗಳ ವ್ಯವಸ್ಥೆಗಳ ಬಗ್ಗೆಯೂ ಚರ್ಚಿಸಿ, ಮಾನ್ಯ ಶಾಸಕರು ಅಧಿಕಾರಿಗಳಿಗೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಂತೆ ಕ್ರಮವಹಿಸಿ ಎಂದು ಸೂಚಿಸಿದರು.
ಮುಖ್ಯವಾಗಿ ಭದ್ರತೆ ಬಗ್ಗೆ ಹೆಚ್ಚುವರಿ ಪೊಲೀಸ್ ನಿಯೋಜನೆ, ವಾಹನ ಸಂಚಾರ ನಿಯಂತ್ರಣ, ಸಾರ್ವಜನಿಕ ಕುಡಿಯುವ ನೀರು, ಶೌಚಾಲಯ, ಆಂಬುಲೆನ್ಸ್ ಸೌಕರ್ಯ, ಸ್ವಚ್ಛತೆ, ವ್ಯಾಪಾರ ಅಂಗಡಿಗಳಿಗೆ ಪರವಾನಗಿ, ನಾಟಕ ಕಂಪನಿಗಳು, ರಥೋತ್ಸವ ಎಳೆಯುವ ಸ್ಥಳ ಪರಿಶೀಲನೆ, ದೇವಾಲಯದ ಸುತ್ತಲಿನ ಅಲಂಕಾರ,
ಇನ್ನಿತರ ಹಲವಾರು ವಿಷಯಗಳ ಕುರಿತು ಶಾಸಕರು ಅಧಿಕಾರಿಗಳೊಂದಿಗೆ ಚರ್ಚಿಸಿ, ಕಟ್ಟುನಿಟ್ಟಿನ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಮಯದಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯ ಗುರು ಹಿರಿಯರು, ಯುವಕ ಮಿತ್ರರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
























