ಶಿಡ್ಲಘಟ್ಟ-ಸೆ,೨೭- ಮೈಸೂರು ಮೂಲದ ಜ್ಞಾನಿ, ಕಾದಂಬರಿಗಳ ಮಹರ್ಷಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು, ಕನ್ನಡ ಸಾಹಿತ್ಯದ ಮೇರು ಚೇತನರಾದ ಎಸ್.ಎಲ್. ಬೈರಪ್ಪ ಅವರು ಅಗಲಿರುವುದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಯವರು ತಿಳಿಸಿದರು.
ಇಂದು ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಾಸವಿ ಶಾಲಾ ಆಡಳಿತದ ವತಿಯಿಂದ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿ, ಹೂವಿಟ್ಟು ಅಂತಿಮ ನಮನ ಸಲ್ಲಿಸಿದರು.
ಕನ್ನಡದ ಅಗ್ರಗಣ್ಯ ಕಾದಂಬರಿಕಾರರಾಗಿರುವ ಅವರು ೨೪ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಪ್ರತಿಯೊಂದು ಕೃತಿಯೂ ಓದುಗರ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿದೆ. ವಿಶೇಷವಾಗಿ ಮಹಾಭಾರತದ ಆಧಾರಿತ ವಿಶ್ಲೇಷಣಾತ್ಮಕ ಕೃತಿಗಳನ್ನು ಹಾಗೇ ಭೂಮಿಭಾಗ, ತಬರನ ಕಟ್ಟೆ, ಸಾರಸ್ವತೀ ಸಮಾರಾಧನೆ, ವಂಶವೃಕ್ಷ, ಗೃಹಭಂಗ, ದಾಟು, ಉತ್ತರಕಾಂಡ, ಯಾನ, ಮಂತ್ರಮಂಜುಷೆ ಇಂತಹ ಅನೇಕ ತತ್ತ್ವಚಿಂತನೆಯ ಕಾದಂಬರಿಗಳು ಜನಪ್ರಿಯತೆ ಪಡೆದಿರುವ ಅವರ ಕಾದಂಬರಿಗಳು ಎಂದರು.
ವಾಸವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ಪತ್ರಕರ್ತರು ಆದ ರೂಪಸಿ ರಮೇಶ್ ರವರು ಮಾತನಾಡಿ ಬೈರಪ್ಪ ಅವರ ಸಾಹಿತ್ಯದಲ್ಲಿ ಜಾತಿ, ಧರ್ಮ ಬೇದವಿಲ್ಲದೆ ಮಾನವೀಯ ಮೌಲ್ಯಗಳನ್ನು ಪ್ರತಿಫಲಿಸಿದ್ದವರು. ವಿಚಾರವಂತರಾಗಿ, ಕಾದಂಬರಿಕಾರರಾಗಿ, ಅವರ ಪುಸ್ತಕಗಳನ್ನು ಓದಿದರೆ ಜಗತ್ತಿನ ಅನೇಕ ವಿಚಾರಗಳನ್ನು ಅರಿಯಬಹುದು.
ಅವರು ಕರ್ನಾಟಕ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಎನ್.ಟಿ.ಆರ್ ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದರು. ಸಮಾಜ ಸೇವೆಯ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಒಂದು ಕೋಟಿ ರೂ ಮೀಸಲಿಟ್ಟು ಮಾನವೀಯತೆಗೂ ಮಾದರಿಯಾಗಿದ್ದಾರೆ ಎಂದರು.
ಸ್ನೇಹಿತ, ನಿರ್ದೇಶಕ ಎಸ್. ಕೆ. ಭಗವಾನ್ ಸಹ ವಾರದಲ್ಲಿ ಒಂದು ದಿನ ಬೈರಪ್ಪರನ್ನು ಭೇಟಿ ಮಾಡಿ ಅವರ ಕುಶಲೋಪರಿ ವಿಚಾರಿಸುತ್ತಿದ್ದರೆಂಬುದು ಬೈರಪ್ಪನವರ ವ್ಯಕ್ತಿತ್ವವನ್ನು ಗುರುತಿಸುತ್ತದೆ ಇಂದು ಬೈರಪ್ಪ ಅವರ ಅಗಲಿಕೆಯಿಂದ ಕನ್ನಡ ನಾಡು ತನ್ನ ಮೇರು ಕವಿಯನ್ನು ಕಳೆದುಕೊಂಡಿದೆ ಸಾಹಿತ್ಯ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಅನುಭವಿಸುವಂತಾಗಿದೆ ಎಂದರು.
ಸಂದರ್ಭದಲ್ಲಿ ವಾಸವಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿ.ಆರ್ ಮಹೇಶ್ ಬಾಬು, ಕಸಾಪ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜು, ವಿ.ಆರ್. ಕೃಷ್ಣ, ನಿವೃತ್ತ ಶಿಕ್ಷಕ ಸುಂದರನ್, ಜಗದೀಶ್, ಮುನಿನಾರಾಯಣಪ್ಪ, ಕಸ್ತೂರಿ ಕರ್ನಾಟಕ ರಾಮಾಂಜನಯ್ಯ, ಆರೋಗ್ಯ ಇಲಾಖೆ ಟಿ.ಟಿ.ನರಸಿಂಹಪ್ಪ, ವಾಸವಿ ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಶಾಲಾ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿ ವಿದ್ಯಾರ್ಥಿಗಳು ಹಾಜರಿದ್ದರು.




























