ಬೆಳೆ ಪರಿಹಾರ ಪಾವತಿ ವಿಫಲ ಹಿನ್ನೆಲೆ:ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳಲು ರೈತರಲ್ಲಿ ಡಿ.ಸಿ. ಮನವಿ

ಕಲಬುರಗಿ,ಡಿ.18: ಪ್ರಸಕ್ತ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿ ಹಾನಿಯಿಂದ ಹಾಳಾದ ಬೆಳೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಹಣ ಘೋಷಿಸಿದ್ದು, ವಿವಿಧ ತಾಂತ್ರಿಕ ಕಾರಣದಿಂದ ಪರಿಹಾರ ಹಣ ಪಾವತಿ ವಿಫಲಗೊಂಡಿದ ಪ್ರಕರಣಗಳಲ್ಲಿ ಸಂಬಂಧಪಟ್ಟ ರೈತರು ರೈತ ಸಂಪರ್ಕ ಕೇಂದ್ರ ಮತ್ತು ಬ್ಯಾಂಕ್‍ಗಳಿಗೆ ಭೇಟಿ ನೀಡಿ ತಾಂತ್ರಿಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಕಾರಣಗಳಿಂದ 12,313 ಪ್ರಕರಣದಲ್ಲಿ ಪರಿಹಾರ ಹಣ ಪಾವತಿ ವೈಫಲ್ಯವಾಗಿದ್ದು, ಇಂತಹ ರೈತರ ಪಟ್ಟಿಯನ್ನು ಸಂಬಂಧಪಟ್ಟ ಗ್ರಾಮಗಳ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಕಚೇರಿಗಳ ಸೂಚನಾ ಫಲಕಗಳಲ್ಲಿ ಪಟ್ಟಿ ಪ್ರಕಟಿಸಿದ್ದ ಪರಿಣಾಮ ಇದೂವರೆಗೆ 3,860 ರೈತರು ಸಮಸ್ಯೆ ಸರಿಪಡಿಸಿಕೊಂಡಿದ್ದು, ಇನ್ನುಳಿದಂತೆ 8,464 ರೈತರು ಸಮಸ್ಯೆ ಸರಿಪಡಿಸಿಕೊಂಡಿರುದಿಲ್ಲ.
ಫ್ರೂಟ್ಸ್ ತಂತ್ರಾಂಶ ಹಾಗೂ ಆಧಾರ್‍ನಲ್ಲಿ ಹೆಸರು ಹೊಂದಾಣಿಕೆಯಲ್ಲಿ ಸಮಸ್ಯೆಯಿಂದ 1,549 ರೈತರಿಗೆ ಪರಿಹಾರ ಹಣ ಪಡೆಯಲು ಸಾಧ್ಯವಾಗಿಲ್ಲ. ಇಂತಹ ರೈತರು ಕೂಡಲೇ ಸಂಬಂಧಪಟ್ಟ ರೈತಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅಧೇ ರೀತಿ 10,544 ಪ್ರಕರಣಗಳಲ್ಲಿ ಆಧಾರ್-ಎನ್.ಪಿ.ಸಿ.ಐ ಮ್ಯಾಪಿಂಗ್ ಆಗದ ಕಾರಣ ಪರಿಹಾರ ಪಾವತಿ ಹಣ ಖಾತೆಗೆ ಜಮೆಯಾಗಿರುವುದಿಲ್ಲ. ಇಂತಹ ರೈತರು ಬ್ಯಾಂಕ್‍ಗೆ ಭೇಟಿ ನೀಡಬೇಕು ಎಂದು ಡಿ.ಸಿ. ತಿಳಿಸಿದ್ದಾರೆ.
ಇದಲ್ಲದೆ ಕೆ.ವೈ.ಸಿ. ಪೆಂಡಿಂಗ್, ನಿಷ್ಕ್ರೀಯ ಬ್ಯಾಂಕ್ ಖಾತೆ, ಖಾತೆ ರದ್ದು, ನಿಖರವಲ್ಲದ ಬ್ಯಾಂಕ್ ಖಾತೆ, ನಿಷ್ಕ್ರೀಯ ಆಧಾರ್ ಸಂಖ್ಯೆ ಜೋಡಣೆದಂತಹ ಅನೇಕ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಪರಿಹಾರ ಹಣ ಪಡೆಯಲು ವಿಫಲರಾಗಿರುವ ರೈತರು ಕೂಡಲೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಪರಿಹಾರ ಹಣ ಪಡೆಯುವಂತೆ ಜಿಲ್ಲಾಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.