
ಕಲಬುರಗಿ:ಮೇ.28: ನಗರದ ಹಿರಿಯ ಚಿತ್ರಕಲಾವಿದರಾದ ಬಾಬುರಾವ್ ಎಚ್ ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ 2023-24ನೇ ಸಾಲಿನ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯು 50,000/- ರೂ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಬಾಬುರಾವ್ ಎಚ್ ಅವರು ಬರೋಡಾದ ಎಂ. ಎಸ್. ವಿಶ್ವವಿದ್ಯಾಲಯದಿಂದ ‘ಪ್ರಿಂಟ್‍ಮೇಕಿಂಗ್’ ನಲ್ಲಿ ಪೋಸ್ಟ್ ಡಿಪ್ಲೋಮಾ ಪದವಿ ಪಡೆದಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅನೇಕ ಕಲಾ ಶಿಬಿರಗಳಲ್ಲಿ ಭಾಗವಹಿಸಿ, ನೂರಾರು ಕಲಾಕೃತಿಗಳನ್ನು ರಚಿಸಿದ್ದಾರೆ. ಮತ್ತು ಹಲವಾರು ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ನವದೆಹಲಿಯ ಅವಂತಿಕಾ ಅಂತರಾಷ್ಟ್ರೀಯ ಕಲಾಪ್ರದರ್ಶನದ ಚಿನ್ನದ ಪದಕ, ರಾಜಸ್ಥಾನ ಲಲಿತಕಲಾ ಅಕಾಡೆಮಿಯು ಏರ್ಪಡಿಸಿದ ಅಖಿಲ ಭಾರತ ರೇಖಾಚಿತ್ರ ಪ್ರದರ್ಶನದಲ್ಲಿ ಪ್ರಥಮ ಬಹುಮಾನ, ಸೆಕೆಂಡ್ ಇಂಡಿಯನ್ ಡ್ರಾಯಿಂಗ್ ಬೆನಾಲೆ ಚಂಡಿಗಢದ ಪ್ರಶಸ್ತಿ, ನವದೆಹಲಿಯ ಐಪೆಕ್ಸ್‍ದ ಶಿಷ್ಯವೇತನ ಮತ್ತು ಮೈಸೂರು ದಸರಾ ಪ್ರಶಸ್ತಿಗೆ ಭಾಜನರಾಗಿರುವ ಬಾಬುರಾವ್ ಎಚ್. ಅವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಿ ಸತ್ಕರಿಸಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕøತರಾದ ಕಲಬುರಗಿಯ ಜಗದೀಶ ಕಾಂಬಳೆ ಮತ್ತು ಅಕಾಡೆಮಿಯ ವಾರ್ಷಿಕ ಕಲಾ ಸ್ಪರ್ಧೆಯ ಬಹುಮಾನಿತರಾದ ಶಿವಪ್ರಸಾದ ಬನ್ನಟ್ಟಿ, ಗಿರೀಶ್ ಕುಲಕರ್ಣಿ ಮತ್ತು ರೆಹಮಾನ ಪಟೇಲ್ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ಅಕಾಡೆಮಿಯ ಅಧ್ಯಕ್ಷ ಪ. ಸ. ಕುಮಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ, ಇಲಾಖೆ ನಿರ್ದೇಶಕಿ ಕೆ. ಎಂ. ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.