Home ಜಿಲ್ಲೆ ಬೆಂಗಳೂರು ಬಾಬು ಜಗಜೀವನರಾಂ ಒಂದು ಸಮುದಾಯದ ನಾಯಕರಲ್ಲ

ಬಾಬು ಜಗಜೀವನರಾಂ ಒಂದು ಸಮುದಾಯದ ನಾಯಕರಲ್ಲ

ಕೋಲಾರ,ಏ,೬-“ಜಾತಿ ವ್ಯವಸ್ಥೆಯ ಅಮಾನವೀಯ ಸಂಕೋಲೆಗಳನ್ನು ಮೆಟ್ಟಿ ನಿಂತು ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯದ ನಾಯಕರಲ್ಲ, ಅವರು ಇಡೀ ದೇಶದ ಅಂತಃಸಾಕ್ಷಿಯನ್ನು ಎಚ್ಚರಿಸಿದ ಮಹಾನ್ ಶಕ್ತಿಗಳು” ಎಂದು ಕೋಲಾರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಬಣ್ಣಿಸಿದರು.


ನಗರದ ಟಿ. ಚನ್ನಯ್ಯ ರಂಗಮಂದಿರ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ ೧೧೯ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಾಬು ಜಗಜೀವನ್ ರಾಮ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅನುಭವಿಸಿದ ನೋವುಗಳು ಮತ್ತು ಎದುರಿಸಿದ ಸವಾಲುಗಳನ್ನು ಸ್ಮರಿಸಿದ ಜಿಲ್ಲಾಧಿಕಾರಿಗಳು, ಅಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ದೇಶದ ಶ್ರೇಷ್ಠ ಮಟ್ಟಕ್ಕೆ ಬೆಳೆದದ್ದು ಇಂದಿನ ಪೀಳಿಗೆಗೆ ಮಾದರಿ ಎಂದರು.


ಮನುಷ್ಯ ಹುಟ್ಟುವಾಗ ಮನುಷ್ಯನಾಗಿಯೇ ಹುಟ್ಟುತ್ತಾನೆ, ಆದರೆ ಸಮಾಜ ಅವನ ಮೇಲೆ ಜಾತಿಯ ಲೇಬಲ್ ಹಚ್ಚುತ್ತದೆ. ಜಾತಿ ಎಂಬುದು ನಾಮಪದವಾಗಿದ್ದರೆ ಒಪ್ಪಬಹುದು, ಆದರೆ ಅದು ಕ್ರಿಯಾಪದವಾಗಿ ’ಜಾತಿಯತೆ’ಯಾಗಿ ಬದಲಾದಾಗ ವ್ಯವಸ್ಥೆ ಅಮಾನವೀಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.


ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ಅವರ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದಿರಬಹುದು. ಆದರೆ ಅದು ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಒಂದೇ ತಾಯಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರುವಂತೆ ಸಾರ್ವಜನಿಕ ಜೀವನದಲ್ಲಿ ಅದು ಸಹಜ. ಇತಿಹಾಸದ ವಿದ್ಯಾರ್ಥಿಗಳಾಗಿ ನಾವು ಅವರಿಂದ ಸಂಘಟಿತ ಹೋರಾಟದ ಪಾಠ ಕಲಿಯಬೇಕು ಎಂದು ಕರೆ ನೀಡಿದರು.


“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕುವೆಂಪು ಅವರ ವಾಣಿಯಂತೆ, ಸಿದ್ದಲಿಂಗಯ್ಯನವರು ಹೇಳಿದ “ಏನಾದರೂ ಆಗು ಮೊದಲು ಮಾನವನಾಗು” ಎಂಬ ತತ್ವ ನಮಗೆ ದಾರಿದೀಪವಾಗಬೇಕು. ಶೋಷಿತರ ಮತ್ತು ದಮನಿತರ ಧ್ವನಿಯಾಗಿ ಕೆಲಸ ಮಾಡುವುದೇ ನಿಜವಾದ ಮಾನವೀಯತೆ ಎಂದರು.
ಈ ಬಾರಿಯ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅರ್ಥಪೂರ್ಣವಾಗಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಸ್ತಬ್ಧಚಿತ್ರಗಳನ್ನು ತರಿಸುವ ನಿರ್ಧಾರ ಮಾಡಲಾಗಿತ್ತು. ಅಲ್ಲದೆ, ಜಗಜೀವನ್ ರಾಮ್ ಅವರ ಜೀವನ ಚರಿತ್ರೆಯ ಕುರಿತು ಸಣ್ಣ ಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ಯುವ ಪೀಳಿಗೆಗೆ ಅವರ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ತಿಳಿಸಿದರು.


ಖ್ಯಾತ ಚಿಂತಕ ಡಾ. ಎಂ. ನಾರಾಯಣಸ್ವಾಮಿ ಅವರು ತಮ್ಮ ಮುಖ್ಯ ಭಾಷಣ ದಲ್ಲಿ “ಸಮಾಜದಲ್ಲಿ ಇಂದು ಪ್ರತಿಯೊಂದು ಸಮುದಾಯಗಳು ತಮ್ಮದೇ ಆದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ನಾಯಕರನ್ನು ಹುಡುಕಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಈ ಪ್ರಕ್ರಿಯೆಯು ಇತರ ಸಮುದಾಯಗಳೊಂದಿಗೆ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು. ನಾಯಕರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ, ಅವರಲ್ಲಿರುವ ಸಾರ್ವತ್ರಿಕ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು” ಎಂದು ಅವರು ಪ್ರತಿಪಾದಿಸಿದರು.


ಮಾದಿಗ ಸಮುದಾಯದ ಘನವಂತ ಇತಿಹಾಸವನ್ನು ಸ್ಮರಿಸಿದ ಅವರು, ರಾಮಾಯಣದ ಜಾಂಬವಂತನಿಂದ ಹಿಡಿದು, ಚಾಲುಕ್ಯರ ಕಾಲದ ಮಾತಂಗ ರಾಜರವರೆಗೆ ಸಮುದಾಯದ ಉಲ್ಲೇಖಗಳಿವೆ ಎಂದರು. ೧೨ನೇ ಶತಮಾನದ ಶರಣ ಅರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗೆ ಪಾದರಕ್ಷೆ ಮಾಡಿಕೊಟ್ಟ ಪ್ರಸಂಗವನ್ನು ನೆನಪಿಸುತ್ತಾ, ಬಸವಣ್ಣನವರು ಆ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಮೂಲಕ ಶ್ರಮ ಸಂಸ್ಕೃತಿಗೆ ಗೌರವ ನೀಡಿದ್ದರು ಎಂದು ವಿವರಿಸಿದರು. ಇಂತಹ ಶ್ರೀಮಂತ ಇತಿಹಾಸವಿದ್ದರೂ ಸಮುದಾಯವು ಇಂದು ಅಸ್ಪೃಶ್ಯತೆಯಿಂದ ಊರ ಹೊರಗಿರಲು ಕಾರಣವೇನು ಎಂಬುದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರ ’ಬ್ರೋಕನ್ ಮೆನ್ ಸಿದ್ಧಾಂತದ ಮೂಲಕ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.


ಬಾಬು ಜಗಜೀವನ್ ರಾಮ್ ಅವರನ್ನು ’ಮೃದು ಅಂಬೇಡ್ಕರ್ ಎಂದು ಬಣ್ಣಿಸಿದ ಅವರು , ದೇಶದ ನಿರ್ಮಾಣದಲ್ಲಿ ಅವರ ಪಾತ್ರ ಅಪಾರ ಎಂದು ಕೊಂಡಾಡಿದರು:
ದೇಶದ ಕಾರ್ಮಿಕ ಕಾನೂನುಗಳಿಗೆ ಬಲ ನೀಡಿದ ಶಿಲ್ಪಿ ಅವರು. ೧೯೭೪ರ ಭೀಕರ ಬರಗಾಲದ ಸಮಯದಲ್ಲಿ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಮತ್ತು ರಸಗೊಬ್ಬರಗಳನ್ನು ಪರಿಚಯಿಸುವ ಮೂಲಕ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದರು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು.


ದೇಶದಲ್ಲಿ ಇಂದಿಗೂ ಇರುವ ಸಾಮಾಜಿಕ ಅಸಮಾನತೆ, ಮೇಲು-ಕೀಳು ಎಂಬ ತಾರತಮ್ಯ ಮತ್ತು ಅಸ್ಪೃಶ್ಯತೆಯಂತಹ ಪಿಡುಗುಗಳನ್ನು ತೊಡೆದುಹಾಕಲು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಅವರಂತಹ ಮಹನೀಯರು ನೀಡಿದ ಹೋರಾಟ ನಮಗೆ ಇಂದಿಗೂ ಪ್ರೇರಣೆಯಾಗಿದೆ.ಎಂದರು.


ಹವಾಮಾನ ವೈಪರೀತ್ಯ ಹಾಗೂ ಬರಗಾಲದ ಸಂದರ್ಭದಲ್ಲಿ ದೇಶ ಅನುಭವಿಸುತ್ತಿದ್ದ ಆಹಾರದ ಕ್ಷಾಮವನ್ನು ಹೋಗಲಾಡಿಸಲು ಜಗಜೀವನ್ ರಾಮ್ ಅವರು ಪಟ್ಟ ಶ್ರಮ ದೊಡ್ಡದು. ದೀರ್ಘಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ದೇಶದಲ್ಲಿ ಆಹಾರ ಭದ್ರತೆ ಮತ್ತು ಕ್ಷೀರ ಕ್ರಾಂತಿಗೆ ಬಲವಾದ ಅಡಿಪಾಯ ಹಾಕಿದರು.


ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ದೇಶದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ ಅವರು, ಬಾಹ್ಯ ಶಕ್ತಿಗಳಿಂದ ದೇಶವನ್ನು ರಕ್ಷಿಸಿ ಸದೃಢವಾದ ನೆಲಗಟ್ಟನ್ನು ಒದಗಿಸಿಕೊಟ್ಟರು ಎಂದರು


ದಲಿತ ಮತ್ತು ಹಿಂದುಳಿದ ಸಮುದಾಯಗಳು ತಮ್ಮಲ್ಲಿನ ಭೇದಭಾವಗಳನ್ನು ಮರೆತು ಒಂದಾಗ ಬೇಕು. ಮಹನೀಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.


ಇದಕ್ಕೂ ಮುನ್ನ ಮುಂಜಾನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪ್ರತಿಮೆಗೆ ಹಾಗೂ ಜಗಜೀವನ್ ರಾಮ್ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸ್ಥಬ್ದ ಚಿತ್ರಗಳಿಗೆ ಮಾನ್ಯ ಶಾಸಕರಾದ ಡಾ. ಕೊತ್ತೂರು. ಜಿ. ಮಂಜುನಾಥ್ ಅವರು ಚಾಲನೆ ನೀಡಿದರು.


ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಎಸ್. ಎಂ ಮಂಗಳ, ಹೆಚ್ಚುವರಿ ಜಿಲ್ಲಾವರಿಷ್ಠಾಧಿಕಾರಿ ರವಿಶಂಕರ್ , ಜಿಲ್ಲಾ ಉಪ ವಿಭಾಗ ಅಧಿಕಾರಿ ಜಂಬಗಿರೇಣುಕಾ ಪ್ರಸಾದ್ ದಿಲೀಪ್ , ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಶ್ರೀನಿವಾಸನ್ , ಸಮಾಜದ ಮುಖಂಡರು ಡಾ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬೆಳಗಾನಹಳ್ಳಿ ಮುನಿವೆಂಕಟಪ್ಪ, , ಪಂಡಿತ್ ಮುನಿವೆಂಕಟಪ್ಪ, ಸಾಹುಕಾರ ಶಂಕರಪ್ಪ, ಸೇರಿದಂತೆ ದಲಿತ ಮುಖಂಡರುವಿವಿಧ ಸಂಘಟನೆ ಮುಖಂಡರು ಇದ್ದರು